ನವದೆಹಲಿ, ಮಾ.28 (Daijiworld News/MB) : ಕಾಬೂಲ್ನ ಸಿಖ್ ಗುರುದ್ವಾರದಲ್ಲಿ ಮಾರ್ಚ್ 25 ರಂದು ಕನಿಷ್ಠ 25 ಆರಾಧಕರನ್ನು ಹತ್ಯೆ ಮಾಡಿದ ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕ ದಳದಲ್ಲಿ ಕೇರಳ ಮೂಲದ ಅಬ್ದುಲ್ ಖಯೂಮ್ ಸೇರಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿರುವುದಾಗಿ ಮಾಧ್ಯಮ ವರದಿ ಮಾಡಿದೆ. ಆತ ಕೇರಳದ ಕಣ್ಣೂರು ಜಿಲ್ಲೆಯ ಚೆಕ್ಕಿಕುಲಂನ ಈ ಮೊದಲು ವಾಸವಾಗಿದ್ದ ಎಂದು ಹೇಳಲಾಗಿದೆ.
ಐಎಸ್ ಬೆಂಬಲಿಗರು ಈ ದಾಳಿಯ ಕುರಿತಾಗಿ ಪೋಸ್ಟ್ ಮಾಡಿ ಭಾರತದಲ್ಲಿ ಮುಸ್ಲಿಮರ ಮೇಲಿನ ಹಿಂಸಾಚಾರಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಈ ದಾಳಿ ನಡೆಸಿರುವುದಾಗಿ ಹೇಳಿದ್ದು, "ಅಲ್ಲಾಹನು ಅಬು ಖಾಲಿದ್ನನ್ನು ಒಪ್ಪಿಕೊಳ್ಳಲಿ, ಭಾರತದಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯಕ್ಕೆ ಪ್ರತೀಕಾರ ತೀರಿಸಿಕೊಂಡಿದ್ದಾನೆ" ಎಂದು ಬರೆಯಲಾಗಿದೆ.
ಕಳೆದ ವರ್ಷ ಪಾಲಕ್ಕಾಡ್ ಮೂಲದ ಜಿಹಾದಿ ರಿಯಾಸ್ ಅಬೂಬಕರ್ ಅವರೊಂದಿಗೆ ಈ ಆತ್ಮಾಹುತಿ ದಾಳಿಕೋರ ಸಂಪರ್ಕದಲ್ಲಿದ್ದ ಹಾಗೂ ದಾಳಿ ಮಾಡುವ ಕುರಿತು ಮಾತುಕತೆ ನಡೆಸಿದ್ದ. ಹಾಗೆಯೇ ಜಹ್ರಾನ್ ಹಾಶಿಮ್ ನೇತೃತ್ವದ 2019 ರ ಶ್ರೀಲಂಕಾ ಆತ್ಮಾಹುತಿ ಬಾಂಬ್ ದಾಳಿಯನ್ನು ಅನುಕರಿಸುವ ರೀತಿಯಲ್ಲಿ ಈ ದಾಳಿಯನ್ನು ರೂಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ರಿಯಾಸ್ ಅವರ ವಿಚಾರಣೆ ನಡೆಸಿದಾಗ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಹಾಶಿಮ್ ಅವರ ಭಾಷಣಗಳು ಮತ್ತು ವೀಡಿಯೊಗಳನ್ನು ನೋಡುತ್ತಿದ್ದಾರೆ ಹಾಗೂ ಝಾಕೀರ್ ನಾಯ್ಕ್ ಆವರ ಭಾಷಣಗಳನ್ನೂ ನೋಡುತ್ತಿರುವುದು ತಿಳಿದು ಬಂದಿದೆ.
ಖಯೂಮ್ ಯಾನೆ ಅಬು ಖಾಲಿದ್ 1995 ರಲ್ಲಿ ಜನಿಸಿದ್ದು ಕನಿಷ್ಠ ಒಂಬತ್ತು ಕೇರಳ ಇಸ್ಲಾಮಿಸ್ಟ್ಗಳ ಗುಂಪಿನಲ್ಲಿ ಸೇರಿದ್ದಾರೆ. ಹಾಗೆಯೇ 2016-17ರಲ್ಲಿ ಸಿರಿಯಾದ ಐಎಸ್ ಆಡಳಿತದ ಪ್ರದೇಶಕ್ಕೆ ಪ್ರಯಾಣಿಸಲು ಸಂಚು ರೂಪಿಸಿದ್ದರು.
ಸಿರಿಯಾವನ್ನು ಯಶಸ್ವಿಯಾಗಿ ತಲುಪಿದವರಲ್ಲಿ ಖಯೂಬ್ ಒಬ್ಬನೇ ಎಂದು ಎನ್ಐಎ ಹೇಳಿದೆ. 2018 ರಲ್ಲಿ ಕ್ಯಾಲಿಫೇಟ್ ಎಂದು ಕರೆಯಲ್ಪಡುವ ಪತನದ ನಂತರ ಅವರು ಸಿರಿಯಾಕ್ಕೆ ತೆರಳಿದ್ದರು ಎಂದು ಹೇಳಲಾಗಿದೆ. ಹಾಗೆಯೇ ಪೂರ್ವ ಅಫ್ಘಾನಿಸ್ತಾನ ಪ್ರಾಂತ್ಯದ ನಂಗಾರ್ಹದಲ್ಲಿರುವ ಹತ್ಯೆಗೀಡಾದ ಭಯೋತ್ಪಾದಕ ಕಮಾಂಡರ್ ಶಜೀರ್ ಮಂಗಲಸೇರಿ ನೇತೃತ್ವದ ಕೇರಳ ಜಿಹಾದಿಗಳ ದೊಡ್ಡ ಗುಂಪಿನಲ್ಲಿ ಸೇರಿಕೊಂಡರು ಎನ್ನಲಾಗಿದೆ.