ಬೆಂಗಳೂರು, ಮಾ 28 (Daijiworld News/MSP): ಈ ಹಿಂದಿನಿಂದಲೂ ರಾಜ್ಯ ಸರ್ಕಾರ ಕೊರೊನಾ ವೈರಸ್ ಹರಡದಂತೆ ಸಾಕಷ್ಟು ಮುಂಜಾಗ್ರತೆ ವಹಿಸಿದ್ದೇವೆ, ಅಲ್ಲದೆ ಪೂರಕ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಹೇಳುತ್ತಾ ಬಂದಿದೆ. ಆದರೆ ಇದೀಗ ಕರ್ನಾಟಕ ರಾಜ್ಯ ಸೋಂಕು ಪೀಡಿತರ ಪಟ್ಟಿಯಲ್ಲಿ ದೇಶದಲ್ಲಿಯೇ 3 ನೇ ಸ್ಥಾನಕ್ಕೇರಿದೆ . ಕೊರೊನಾ ತಡೆಗಟ್ಟಲು ಮೊದಲು ವೈದ್ಯರಿಗೆ ಸೂಕ್ತ ಸವಲತ್ತು ಒದಗಿಸಿ ಹೆಚ್ಚಿನ ಪ್ರಮಾಣದಲ್ಲಿ ವೈದ್ಯಕೀಯ ಸಾಮಾಗ್ರಿಗಳನ್ನು ಜೋಡಿಸಿಕೊಳ್ಳಬೇಕು ಇಲ್ಲವಾದರೆ ಜಗತ್ತನ್ನೇ ಆವರಿಸಿರುವ ಮಹಾಮಾರಿ ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿ 'ಮರಣ ಮೃದಂಗ' ಬಾರಿಸುವ ಕಾಲ ದೂರವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಸರ್ಕಾರ ಮೊದಲು ಹೆಚ್ಚಿನ ಪ್ರಮಾಣದಲ್ಲಿ ವೈದ್ಯಕೀಯ ಪರಿಕರಗಳನ್ನು ಹೊಂದಿಸಿಕೊಳ್ಳಬೇಕು. ವೈದ್ಯರಿಗೆ ಸೂಕ್ತ ಸವಲತ್ತುಗಳನ್ನು ನೀಡಬೇಕು. ಘೋಷಣೆಗಳು ಹೇಳಿಕೆಗಳು ಅಷ್ಟಕ್ಕೆ ಸೀಮಿತವಾಗಬಾರದು,ಕಾರ್ಯರೂಪಕ್ಕೆ ಬರಬೇಕು ಇಲ್ಲವಾದ್ರೆ ರಾಜ್ಯದಲ್ಲಿ 'ಮರಣ ಮೃದಂಗ' ಬಾರಿಸುವ ಕಾಲ ದೂರವಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕೊರೊನಾ ವೈರಸ್ ಕುರಿತ ಸುದ್ದಿಗಳನ್ನು ಮಾಧ್ಯಮಗಳಿಗೆ ತಿಳಿಸುವ ವಿಚಾರದಲ್ಲಿ ಸರ್ಕಾರದಲ್ಲಿ ಎರಡು ಧ್ರುವಗಳಿವೆ ಎಂದು ನಾನು ಮೊದಲೇ ಹೇಳಿದ್ದೆ. ಕೊರೊನಾ ನಿಯಂತ್ರಣದ ಜವಾಬ್ದಾರಿ ಒಬ್ಬ ಸಚಿವರ ಹೆಗಲಿಗೆ ವಹಿಸುವ ಮೂಲಕ ಆ ಮುಸುಕಿನ ಗುದ್ದಾಟ ಬಯಲಾಗಿದೆ. ಇದು ಮಾಧ್ಯಮಗಳಲ್ಲೂ ವರದಿಯಾಗಿದೆ. ಈ ಸಂದರ್ಭದಲ್ಲಿ ಪ್ರತಿಷ್ಠೆ ಮುಖ್ಯವಲ್ಲ ಎಂದು ಟ್ವೀಟ್ ಮಾಡಿ ಹೇಳಿದ್ದಾರೆ.
ಒಂದು ಸಾವಿರ ವೆಂಟಿಲೇಟರ್, 10 ಲಕ್ಷ ಮಾಸ್ಕ್ , 5ಲಕ್ಷ ಕಿಟ್, 15ಲಕ್ಷ ತ್ರೀ ಲೇಯರ್ ಮಾಸ್ಕ್ ಖರೀಸುವುದಾಗಿ ಸರ್ಕಾರ ಹೇಳಿ ವಾರವಾಯ್ತು. ಒಂದು ವಾರದಲ್ಲಿ ಸೋಂಕು ತೀವ್ರಗತಿಯಲ್ಲಿ ಏರಿದೆ. ಆದರೆ ಸರ್ಕಾರ ಹೇಳಿರುವುದೆಲ್ಲವೂ ಕಾರ್ಯಗತವಾಗಿದೆಯೇ? ಕ್ಷಿಪ್ರಗತಿಯಲ್ಲಿ ವ್ಯಾಪಿಸುತ್ತಿರುವ ಸೋಂಕಿನ ವಿರುದ್ಧ ಇಷ್ಟು ನಿಧಾನದ ಕಾರ್ಯಾಚರಣೆ ಸರಿಯೇ? ಎಂದು ಪ್ರಶ್ನಿಸಿದ್ದಾರೆ.
ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರಿಗೆ ಪ್ರೋತ್ಸಾಹ ಧನ ನೀಡುವಂತೆ ನಾನು ಕೋರಿದ್ದೆ.ಆದರೆ, ರಕ್ಷಣಾ ಕವಚವನ್ನೇ ನೀಡದಿರುವ ಬಗ್ಗೆ ಮಾಹಿತಿ ಇದೆ. ಜನ ರಸ್ತೆಗಳಿಯದಂತೆ ನೋಡಿಕೊಳ್ಳಲು ಪೊಲೀಸರನ್ನು ನಿಯೋಜಿಸಲಾಗಿದೆ.ಅವರಿಗೂ ಸೂಕ್ತ ರಕ್ಷಣಾ ಕವಚಗಳಿಲ್ಲ.ವೈದ್ಯರು, ವೈದ್ಯಕೀಯ ಸಿಬ್ಬಂದಿಗಳಂತೆ ಪೊಲೀಸರಿಗೂ ರಕ್ಷಣಾ ಕವಚಗಳನ್ನು ವಿತರಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹೊರಡಿಸಿರುವ ಲೌಕ್ ಡೌನ್ ಹೊರತುಪಡಿಸಿ, ವೈರಸ್ ತಡೆಗೆ ಸರ್ಕಾರ ಕ್ರಮಗಳನ್ನು ಕೈಗೊಂಡಿರುವುದು ನಿಜವೇ ಆದರೆ ವೈದ್ಯರು ಹಾಗೂ ವೈಧ್ಯಕೀಯ ಸಿಬ್ಬಂದಿಗೆ ಸೂಕ್ತ ಸವಲತ್ತು, ರಕ್ಷಣಾ ಕವಚ ಪೂರೈಸಿದ್ದರೆ ಚಿಕಿತ್ಸೆಗೆ ವೈದ್ಯಕೀಯ ಸಲಕರಣೆಗಳನ್ನು ನೀಡಿದ್ದರೆ ಸೋಂಕು ಶರವೇಗದಲ್ಲಿ ವ್ಯಾಪ್ತಿಸುತ್ತಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.