ತಿರುವನಂತಪುರ, ಮಾ.28 (DaijiworldNews/PY) : ಕೇರಳ ಸರ್ಕಾರ ಸಮುದಾಯ ಅಡುಗೆ ಕೇಂದ್ರಗಳನ್ನು ಸ್ಥಾಪಿಸುವ ಮುಖಾಂತರ ಅವಶ್ಯಕತೆ ಇರುವವರ ಮನೆ ಬಾಗಿಲಿಗೆ ಉಚಿತವಾಗಿ ಸಿದ್ದ ಆಹಾರ ಪೂರೈಸುವ ಯೋಜನೆಯನ್ನು ಪ್ರಾರಂಭಿಸಿದೆ.
ಈ ಯೋಜನೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಘೋಷಿಸಿದ ಮರುದಿನವೇ 43 ಸಮುದಾಯ ಅಡುಗೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸಿದ್ಧ ಆಹಾರವನ್ನು ಸುಮಾರು 2,215 ಮನೆಗಳಿಗೆ ಪೂರೈಸಲಾಗಿದ್ದು, ಈ ಪೈಕಿ ಉಚಿತವಾಗಿ 1,639 ಮನೆಗಳಿಗೆ ಆಹಾರ ವಿತರಿಸಲಾಗಿದೆ. ಇನ್ನೂ 528 ಸಮುದಾಯ ಅಡುಗೆ ಕೇಂದ್ರಗಳು ಶುಕ್ರವಾರದ ವೇಳೆಗೆ ಸ್ಥಾಪನೆಯಾಗಲಿದೆ. ಇನ್ನೆರಡು ದಿನಗಳಲ್ಲಿ ಉಳಿದವುಗಳು ಸ್ಥಾಪನೆಯಾಗಲಿವೆ ಎಂಬುದಾಗಿ ವರದಿ ತಿಳಿಸಿದೆ. ದುರ್ಬಲವರ್ಗದವರು, ಬಡವರು, ನಿರ್ಗತಿಕರಿಗೆ ಲಾಕ್ಡೌನ್ ಪರಿಣಾಮದಿಂದ ಆಹಾರ ಸಮಸ್ಯೆಯಾಗಿದೆ ಎಂಬ ವರದಿಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ರೂಪಿಸಲಾಗಿದೆ
ಉಚಿತವಾಗಿ ಆಹಾರವನ್ನು ಆರ್ಥಿಕವಾಗಿ ದುರ್ಬಲರಾದವರಿಗೆ ನೀಡಲಾಗುತ್ತಿದೆ. ಇದರ ಪ್ರಯೋಜನವನ್ನು ಸಾರ್ವಜನಿಕರೂ ಪಡೆಯಬಹುದಾಗಿದ್ದು, ಅವರಿಗೆ ಸಸ್ಯಾಹಾರಿ ಊಟಕ್ಕೆ ₹20 ನಿಗದಿಪಡಿಸಲಾಗಿದೆ. ಕಾರ್ಯಕರ್ತರಿಗೆ ಒಂದು ಊಟಕ್ಕೆ ₹5ರಂತೆ ಸೇವಾ ಶುಲ್ಕ ನೀಡಬೇಕಾಗುತ್ತದೆ.