ಬಾಗಲಕೋಟೆ, ಮಾ.28 (DaijiworldNews/PY) : "ಸಾರ್ವಜನಿಕರು ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಹಾಗೂ ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸಿ ತಮ್ಮ ಕುಟುಂಬ ಪರಿವಾರಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕರಿಸಬೇಕು" ಎಂದು ಡಿಸಿಎಂ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ಅಧಿಕಾರಿಗಳೊಂದಿಗೆ ಕೊರೊನಾ ವೈರಸ್ ಕುರಿತು ಸಭೆ ನಡೆಸಿ ಬಳಿಕ ಮಾತನಾಡಿದ ಅವರು, "ನಾಲ್ಕು ಚೆಕ್ ಪೋಸ್ಟ್ಗಳನ್ನು ಜಿಲ್ಲೆಯಲ್ಲಿ ತೆರೆಯಲಾಗಿದ್ದು, ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತಿವೆ. 16,929 ವಾಹನಗಳಲ್ಲಿ ಪ್ರಯಾಣಿಸುತ್ತಿದ್ದು, 91,717 ಜನರನ್ನು ತಪಾಸಣೆ ಮಾಡಲಾಗಿದೆ. ವಿದೇಶಗಳಿಂದ ಜಿಲ್ಲೆಗೆ ವಾಪಾಸ್ಸಾಗಿರುವ 165 ಜನರನ್ನು ಹೋಂಕ್ವಾರಂಟೈನ್ನಲ್ಲಿಡಲಾಗಿದೆ. 10 ಮಂದಿಯ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಎಲ್ಲಾ ಮಾದರಿಗಳು ನೆಗೆಟಿವ್ ಆಗಿರುತ್ತವೆ" ಎಂದು ತಿಳಿಸಿದರು.
"ಬಾಗಲಕೋಟೆ ನಗರದಲ್ಲಿರುವ ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 12 ಬೆಡ್ಗಳ ಐಸೋಲೇಷನ್ ವಾರ್ಡ್ ತೆರೆಯಲಾಗಿದೆ. ಜಿಲ್ಲೆಯಲ್ಲಿ 12 ಫೀವರ್ ಕ್ಲಿನಿಕ್ಗಳನ್ನು ತೆರೆಯಲಾಗಿದ್ದು, 11 ವೆಂಟಿಲೇಟರ್ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ತಾತ್ಕಾಲಿಕವಾಗಿ 3 ಹಾಸ್ಟೆಲ್ಗಳನ್ನು ಗುರುತಿಸಿ, ಅದರಲ್ಲಿ ಎಸ್ ಐಸಿಗಳನ್ನು ತೆರೆಯಲಾಗಿದೆ. ಎಲ್ಲಾ ಐತಿಹಾಸಿಕ ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರಗಳನ್ನು ಜಿಲ್ಲೆಯಲ್ಲಿ ಸಂಪೂರ್ಣ ಬಂದ್ ಮಾಡಲಾಗಿದೆ" ಎಂದು ಹೇಳಿದರು.
"ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅವಶ್ಯಕ ಸಾಮಾಗ್ರಿಗಳನ್ನು ಮಾತ್ರ ಪೂರೈಕೆ ಮಾಡುವಂತೆ ಸರಕು ಸಾಗಾಟ ವಾಹನಗಳ ಮಾಲಕರ ಜೊತೆ ಸಭೆ ನಡೆಸಿ ಸೂಚಿಸಲಾಗಿದೆ. ಅಲ್ಲದೇ, ಸಾರಿಗೆ ಸೇವೆಯನ್ನು ನಿರ್ಬಂಧಿಸಲಾಗಿದೆ. ಮಾರ್ಚ್ ತಿಂಗಳ ಪಡಿತರವನ್ನು ನೀಡಲಾಗಿದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಎರಡು ತಿಂಗಳ ಪಡಿತರವನ್ನು ಎಪ್ರಿಲ್ ಮೊದಲ ವಾರದಲ್ಲಿ ನೀಡಲಾಗುವುದು. ಅಧಿಕಾರಿಗಳಿಗೆ ಸ್ವಚ್ಛತೆಯನ್ನು ಕಾಪಾಡಿ, ಶುದ್ಧ ಕುಡಿಯುವ ನೀರು ಪೂರೈಸುವಂತೆ ಸೂಚನೆ ನೀಡಲಾಗಿದೆ. ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ" ಎಂದು ತಿಳಿಸಿದರು.