ಮುಂಬೈ, ಮಾ.28 (DaijiworldNews/PY) : ಕೊರೊನಾ ವೈರಸ್ ವಿರುದ್ದ ಹೋರಾಟ ಮಾಡುತ್ತಿರುವ ಸರ್ಕಾರಕ್ಕೆ ಸ್ಪಂದಿಸಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪಿಎಂ-ಕೇರ್ಸ್ ನಿಧಿಗೆ ₹25 ಕೋಟಿ ನೀಡುವುದಾಗಿ ಶನಿವಾರ ಘೋಷಿಸಿದ್ದಾರೆ. ಹಾಗೆಯೇ ಟಾಟಾ ಗ್ರೂಪ್ ಮುಖ್ಯಸ್ಥ ಹಿರಿಯ ಉದ್ಯಮಿ ರತನ್ ಟಾಟಾ ಅವರು ಕೂಡಾ ಟಾಟಾ ಟ್ರಸ್ಟ್ನಿಂದ 500 ಕೋಟಿ. ರೂ ನೆರವು ಘೋಷಿಸಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ರತನ್ ಟಾಟಾ ಕೊರೊನಾ ವೈರಸ್ ಇಡೀ ಮಾನವ ಜನಾಂಗಕ್ಕೆ ಎದುರಾಗಿರುವ ಅತ್ಯಂತ ಕಠಿಣ ಸವಾಲು. ಈ ಹಿಂದೆಯೂ ದೇಶಕ್ಕೆ ಅಗತ್ಯ ಬಿದ್ದಾಗಲೆಲ್ಲಾ ಟಾಟಾ ಟ್ರಸ್ಟ್ಗಳು ಹಾಗೂ ಟಾಟಾ ಗ್ರೂಪ್ ಕಂಪೆನಿಗಳು ಸ್ಪಂದಿಸಿವೆ. ಆದರೆ, ಈಗ ಅಗತ್ಯ ಈ ಹಿಂದೆಂದಿಗಿಂತಲೂ ಬಹಳ ಅಧಿಕವಾಗಿದೆ ಎಂದು ಬರೆದಿದ್ದಾರೆ.
ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಪ್ರಧಾನ ಮಂತ್ರಿ – ಸಿಟಿಜನ್ ಅಸಿಸ್ಟೆನ್ಸ್ ಆ್ಯಂಡ್ ರಿಲೀಫ್ ಇನ್ ಎಮರ್ಜೆನ್ಸಿ ಸಿಚ್ಯುಯೇಷನ್ ಫಂಡ್ (ಕೇರ್ಸ್) ರಚಿಸಿರುವ ಬಗ್ಗೆ ಪ್ರಧಾನಿ ಮೋದಿ ಅವರು ಶನಿವಾರ ತಿಳಿಸಿದ್ದು, ಈ ನಿಧಿಗೆ ದೇಣಿಗೆ ಕೊಡುವ ಮುಖಾಂತರ ಈ ಹೋರಾಟಕ್ಕೆ ಜನರೂ ಕೈಜೋಡಿಸಬಹುದು ಎಂದು ಪ್ರಧಾನಿ ಮೋದಿ ಅವರು ಹೇಳಿದ್ದರು.
ಸದ್ಯ ನಮ್ಮ ಜನರ ಜೀವನವೇ ಮುಖ್ಯವಾಗಿದೆ. ₹25 ಕೋಟಿ ಹಣವನ್ನು ಪಿಎಂ–ಕೇರ್ಸ್ ನಿಧಿಗೆ ನೀಡುವ ಪ್ರಮಾಣ ಮಾಡುತ್ತಿದ್ದೇನೆ. ಜೀವ ಉಳಿಸೋಣ, ಜೀವವಿದ್ದರೆ ಮಾತ್ರ ಜಗತ್ತು ಇರಲಿದೆ ಎಂಬುದಾಗಿ ಅಕ್ಷಯ್ ಕುಮಾರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇದೇ ರೀತಿ ಇತ್ತೀಚೆಗೆ ನಟ ರಜನಕಾಂತ್ ಅವರು ದಿನಗೂಲಿ ನೌಕರರಿಗಾಗಿ ₹50 ಲಕ್ಷ ದೇಣಿಗೆಯನ್ನು ಘೋಷಿಸಿದ್ದರು. ಅಲ್ಲದೇ, ನಟರಾದ ಹೃತಿಕ್ ರೋಶನ್, ಕಪಿಲ್ ಶರ್ಮಾ, ಪ್ರಭಾಸ್, ಮಹೇಶ್ ಬಾಬು, ಪವಲ್ ಕಲ್ಯಾಣ್, ರಾಮ್ ಚರಣ್ ಸೇರಿದಂತೆ ಹಲವು ನಟರೂ ದೇಣಿಗೆ ನೀಡಿದ್ದಾರೆ.