ಚೆನ್ನೈ, ಮಾ 29 (Daijiworld News/MSP): ಮಾರಕ ಕೊರೊನಾ ತಡೆಗೆ ಸರ್ಕಾರದ ವಿಧಿಸಿರುವ ಲೌಕ್ ಡೌನ್ ಉಲ್ಲಂಘಿಸದೆ ಸುಮ್ಮನೆ ಮನೆಯಲ್ಲೇ ಇರುವುದು ಅನಿವಾರ್ಯ ಎಂದರೂ ,ಅದ್ಯಾಕೋ ಜನ ಮಾತ್ರ ಕಿವಿ ಹಾಕಿಕೊಳ್ಳುತ್ತಿಲ್ಲ, ಭಾನೂವಾರದ ಬಾಡೂಟಕ್ಕಾಗಿ ಮಾಂಸ ತರಲೆಂದೋ , ಅಥವಾ ಇನ್ಯಾವುದೋ ಕುಂಟು ನೆಪ ಹೇಳಿ ರಸ್ತೆಗಿಳಿಯುತ್ತಾರೆ. ಇವರನ್ನು ನಿಯಂತ್ರಿಸುವುದೇ ಪೊಲೀಸರಿಗೆ ದೊಡ್ಡ ತಲೆಬಿಸಿಯಾಗಿದೆ. ಈ ತಲೆಬಿಸಿಯ ನಡುವೆ ಚೆನ್ನೈ ಪೊಲೀಸರ ತಲೆ ಮೇಲೆಯೇ ಕೊರೊನಾ ವೈರಸ್ ಹತ್ತಿ ಕುಳಿತಿದೆ.
ಸಾರ್ವಜನಿಕರು ರಸ್ತೆಗಿಳಿಯದಂತೆ, ಲಾಠಿ ಪ್ರಯೋಗ, ಬುದ್ದಿವಾದ, ಎಚ್ಚರಿಕೆ, ಬಸ್ಕಿ, ಹೀಗೆ ನಾನಾ ತಂತ್ರಗಳನ್ನು ಪ್ರಯೋಗಿಸುತ್ತಿರುವ ಪೊಲೀಸರು ಇದೀಗ ಮತ್ತೊಂದು ವಿನೂತನ ಜಾಗೃತಿಗೆ ಮುಂದಾಗಿದ್ದಾರೆ. ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಕೊರೊನಾ ವೈರಸ್ ಕುರಿತು ಜನಜಾಗೃತಿ ಮೂಡಿಸಲು ಕಲಾವದಿ ಗೌತಮ್ ಎಂಬುವವರು ತಯಾರಿಸಿರುವ ಈ ಕೊರೊನಾ ಹೆಲ್ಮೆಟ್ ಸದ್ಯ ಚೆನ್ನೈ ಪೊಲೀಸರ ತಲೆ ಮೇಲೆ ರಾರಾಜಿಸುತ್ತಿದೆ. ಕೊರೊನಾ ವೈರಸ್ ಮಾದರಿಯಲ್ಲಿರುವ ಈ ಹೆಲ್ಮೆಟ್ ನ್ನು ಕಲಾವಿದ ಗೌತಮ್ ಎಂಬುವವರು ರಚಿಸಿದ್ದು, ಇದನ್ನು ಜನಜಾಗೃತಿ ಮೂಡಿಸಲು ಚೆನ್ನೈ ಪೊಲೀಸ್ ಇಲಾಖೆ ಬಳಿಸಿಕೊಳ್ಳುತ್ತಿದೆ. ಮಾತ್ರವಲ್ಲದೆ ಕೊರೊನಾ ಎಷ್ಟು ಅಪಾಯಕಾರಿ ಎಂದು ತಿಳಿಹೇಳುತ್ತಿದ್ದಾರೆ.
ಸಂಕಷ್ಟದ ಸಮಯದಲ್ಲಿ ಜನರೊಂದಿಗೆ ಸಂಯಮದಿಂದ ವರ್ತಿಸಿ ಮಾರಕ ವೈರಾಣು ಕುರಿತು ಜಾಗೃತಿ ಮೂಡಿಸುತ್ತಿರುವ ಪೊಲೀಸರ ಕಾರ್ಯ ನಿಜಕ್ಕೂ ಶ್ಲಾಘನೀಯ.