ಬಾಗಲಕೋಟೆ ಮಾ 29 (Daijiworld News/MSP): ನೆರೆಯ ಕೇರಳ ರಾಜ್ಯದ ಕಾಸರಗೋಡಿನಿಂದ ಕಳೆದ ಎರಡು ದಿನಗಳಲ್ಲಿ ಬಾಗಲಕೋಟೆಗೆ ಆಗಮಿಸಿದ ವ್ಯಕ್ತಿಗಳನ್ನು ಪರಿಹಾರ ಕೇಂದ್ರದಲ್ಲಿ ಹೋಮ್ ಕ್ವಾರಂಟೈನ್ ನಲ್ಲಿ ಇರಿಸಿ ಅವರ ಮೇಲೆ ತೀವ್ರ ನಿಗಾವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಜಿಲ್ಲೆಯ ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮಕ್ಕೆ ಆಗಮಿಸಿದ 23 ಜನರನ್ನು ಮ್ಯಾಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಇರಿಸಲಾಗಿದೆ. ಗುಳೇದಗುಡ್ಡ ತಾಲೂಕಿನ ಆಸಂಗಿ ಗ್ರಾಮಕ್ಕೆ ಆಗಮಿಸಿದ 22 ಜನರನ್ನು ಆಶಾದೀಪ ಅಭಿವೃದ್ಧಿ ಸಂಸ್ಥೆಯ ಲ್ಲಿ ಇರಿಸಿ ನಿಗಾ ವಹಿಸಲಾಗುತ್ತಿದೆ.
ಇನ್ನು ಹುನಗುಂದಕ್ಕೆ ಆಗಮಿಸಿದ 28 ಜನರನ್ನು ಹುನಗುಂದದಲ್ಲಿರುವ ಮೆಟ್ರಿಕ್ ನಂತರದ (ಪ.ಜಾ) ವಿದ್ಯಾರ್ಥಿ ನಿಲಯ ಮತ್ತು 14 ಜನರನ್ನು ಆದರ್ಶ ವಿದ್ಯಾಲಯದ ಪರಿಹಾರ ಕೇಂದ್ರದಲ್ಲಿ ಇರಿಸಿ ನಿಗಾ ವಹಿಸಲಾಗುತ್ತಿದೆ.
ಕಾಸರಗೋಡು, ಗೋವಾ ಮತ್ತು ಮಂಗಳೂರಿನಿಂದ ಆಗಮಿಸುತ್ತಿರುವವರ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ. ಹುನಗುಂದ ಮತ್ತು ಬಾದಾಮಿ ತಾಲೂಕಿನಿಂದ ಹೊರ ಜಿಲ್ಲೆ, ರಾಜ್ಯಕ್ಕೆ ಗುಳೆ ಹೋದವರ ಸಂಖ್ಯೆ ಹೆಚ್ಚು ಎಂದು ತಿಳಿದು ಬಂದಿದ್ದು, ಬಾಗಲಕೋಟೆಗೆ ಬರುವವರ ಮೇಲೆ ತೀವ್ರ ನಿಗಾವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.