ಪುಣೆ, ಮಾ.29 (DaijiworldNews/PY) : ಕೊರೊನಾ ವೈರಸ್ ಸೋಂಕು ದೃಢಪಡಿಸುವ ಪಾಥೋಡಿಟೆಕ್ಟ್ ಕಿಟ್ ಅನ್ನು ಕೇವಲ ಎರಡೂವರೆ ತಾಸಿನಲ್ಲಿ ಅಭಿವೃದ್ದಿಪಡಿಸುವ ಮೂಲಕ ಪುಣೆ ಮೂಲದ ಸೂಕ್ಷ್ಮರೋಗಾಣು ಶಾಸ್ತ್ರಜ್ಞೆ ಎಲ್ಲರ ಮೆಚ್ಚುಗೆ ಗಳಿಸಿಕೊಂಡಿದ್ದಾರೆ.
ಪಾಥೋಡಿಟೆಕ್ಟ್ ಕಿಟ್ ಮೊದಲ ಮೇಡ್-ಇನ್ ಇಂಡಿಯಾ ಕೊರನಾ ವೈರಸ್ ಕಿಟ್ ಆಗಿದೆ. ಮಾರುಕಟ್ಟೆಗೆ ಗುರುವಾರವಷ್ಟೇ ಪ್ರವೇಶಿಸಿದ ಈ ಕಿಟ್ ಹಿಂದಿರುವ ನಾರಿಯ ಹೆಸರೇ ಮಿನಲ್ ದಖಾವೆ ಭೋಸ್ಲೆ. ಇನ್ನೊಂದು ವಿಶೇಷವೆಂದರೆ ಅವರು ಹೆಣ್ಣು ಮಗುವಿಗೆ ಜನ್ಮ ನೀಡುವ ಕೆಲವೇ ಗಂಟೆಯ ಮುನ್ನ ಈ ಕಿಟ್ ಅನ್ನು ಸಿದ್ದಗೊಳಿಸಿದ್ದಾರೆ.
ಪುಣೆ ಮೂಲದ ಮೈಲ್ಯಾಬ್ಸ್ ಡಿಸ್ಕವರಿ ಸಂಸ್ಥೆಯ ಸಂಶೋಧನೆ ಹಾಗೂ ಅಭಿವೃದ್ದಿ ವಿಭಾಗದ ಮುಖ್ಯಸ್ಥರಾಗಿರುವ ಮಿನಲ್ ಅವರ ನೇತೃತ್ವದ ತಂಡ ಅಭಿವೃದ್ದಿಪಡಿಸಿರುವ ಈ ಕಿಟ್ನ ಉತ್ಪಾದನೆ ಹಾಗೂ ಮಾರಾಟಕ್ಕೆ ಸರ್ಕಾರದ ಅನುಮತಿ ದೊರೆತಿದ್ದು, ಈಗಾಗಲೇ ಬೆಂಗಳೂರು, ದೆಹಲಿ, ಗೋವಾ ಹಾಗೂ ಪುಣೆಯಲ್ಲಿನ ಲ್ಯಾಬ್ಗಳಲ್ಲಿ ಈ ಕಿಟ್ ಬಳಸಲಾಗುತ್ತಿದೆ.
100 ಮಾದರಿಗಳ ಪರೀಕ್ಷೆಯನ್ನು ಒಂದು ಕಿಟ್ನಲ್ಲಿ ನಡೆಸಬಹುದಾಗಿದೆ. ಈ ಕಿಟ್ 1,200 ರೂ.ಗೆ ಲಭ್ಯವಿದೆ. ಪ್ರಸ್ತುತ ವಿದೇಶಗಳಿಂದ ತರಿಸುತ್ತಿರುವ ಒಂದಿ ಕಿಟ್ಗೆ 4,500 ರೂ. ನೀಡಲಾಗುತ್ತಿದೆ. ದೇಸಿ ಕಿಟ್ ಮೂಲಕ ಪರೀಕ್ಷೆ ನಡೆಸಿದರೆ ಎರಡೂವರೆ ತಾಸಿನಲ್ಲಿ ಫಲಿತಾಂಶ ಲಭ್ಯವಾಗುತ್ತದೆ ಎಂದು ವೈರಾಲಜಿಸ್ಟ್ ಮಿನಲ್ ಹೇಳುತ್ತಾರೆ.
ಈ ರೀತಿಯ ಕಿಟ್ ಅಭಿವೃದ್ದಿಪಡಿಸಲು ಕನಿಷ್ಠ ನಾಲ್ಕು ತಿಂಗಳು ಬೇಕು. ಆದರೆ, ಪಾಥೋಡಿಟೆಕ್ಟ್ ಕಿಟ್ ಅನ್ನು ಮಿನಲ್ ಹಾಗೂ ತಂಡ ಕೇವಲ ಆರು ವಾರಗಳಲ್ಲಿ ಅಭಿವೃದ್ದಿಪಡಿಸಿದೆ.