ನವದೆಹಲಿ,ಮಾ 29 (Daijiworld News/MSP): ನಾನು ಮೊತ್ತಮೊದಲಿಗೆ ದೇಶವಾಸಿಗಳ ಕ್ಷಮೆಯಾಚಿಸುತ್ತೇನೆ. ಅನೇಕ ಜನರು ನನ್ನ ಮೇಲೆ ಕೋಪಕೊಂಡಿದ್ದಾರೆ. ಆದರೆ ಕೊರೊನಾ ಹರಡದಂತೆ ಕಠಿಣ ನಿರ್ಧಾರ ಅನಿವಾರ್ಯವಾಗಿತ್ತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶವಾಸಿಗಳಲ್ಲಿ ಕ್ಷಮೆ ಕೋರಿದ್ದಾರೆ.
ಜನಪ್ರಿಯ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ನಲ್ಲಿ ಭಾಷಣ ಮಾಡಿದ ಅವರು, 21 ದಿನಗಳ ಭಾರತ ಲಾಕ್ ಡೌನ್ ಕುರಿತಂತೆ ದೇಶದ ಜನತೆಯಲ್ಲಿ ಕ್ಷಮೆಯಾಚಿಸಿದರು. "ಇಷ್ಟೊಂದು ಕಠಿಣ ಕ್ರಮ ತೆಗೆದುಕೊಂಡಿದ್ದರಿಂದ ನಿಮ್ಮ ಜೀವನಕ್ಕೆ ತೊಂದರೆಯಾಗಿದೆ, ನನ್ನ ಮೇಲೆ ಅನೇಕರಿಗೆ ಕೋಪವಿರಬಹುದು. ಲಾಕ್ ಡೌನ್ ನಿಂದ ಬಡ ವರ್ಗದ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ಆದರೆ ಕೊರೋನಾ ವೈರಸ್ ಎಂಬ ಶತ್ರುವಿನ ವಿರುದ್ಧ ಹೋರಾಡಲು ನನಗೆ ಬೇರೆ ಮಾರ್ಗವಿಲ್ಲ, ದೊಡ್ಡ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು. ಹೀಗಾಗಿ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ, ಭಾರತೀಯರ ಸುರಕ್ಷತೆ ನಮಗೆ ಮುಖ್ಯವಾಗಿದೆ. ನಿಮ್ಮನ್ನು, ನಿಮ್ಮ ಕುಟುಂಬವನ್ನು ರಕ್ಷಿಸಲು ಇದೊಂದೇ ದಾರಿ '' ಎಂದರು.
"ಲಾಕ್ ಡೌನ್ ಸಂದರ್ಭದಲ್ಲಿ ಕಾನೂನನ್ನು ದುರುದ್ದೇಶಪೂರ್ವಕವಾಗಿ ಯಾರು ಮುರಿಯಲು ನೋಡುವುದಿಲ್ಲ, ಆದರೂ ಕೆಲವರು ನಿಯಮ ಪಾಲಿಸುತ್ತಿಲ್ಲ. ಆದರೆ ಲಾಕ್ ಡೌನ್ ನ್ನು ಪಾಲಿಸದಿದ್ದರೆ ಕೊರೋನಾ ವೈರಸ್ ನಿಂದ ಪಾರಗಲು, ಅಪಾಯದಿಂದ ರಕ್ಷಿಸಿಕೊಳ್ಳಲು ಕಷ್ಟವಾಗುತ್ತದೆ" ಎಂದರು.
ಕೊರೋನಾ ವೈರಸ್ ಮನುಕುಲವನ್ನು ಸಂಹಾರ ಮಾಡಲು ಹೊರಟಂತಿದೆ. ಹೀಗಾಗಿ ಇದು ಸಾವು, ಬದುಕಿನ ಮದ್ಯೆ ನಡೆಸುತ್ತಿರುವ ಹೋರಾಟ. ಹೀಗಾಗಿ ನಾವೆಲ್ಲಾ ಜೊತೆಗೂಡಿ ಅದನ್ನು ಹೊಡೆದೋಡಿಸಬೇಕು ಎಂದು ಕರೆ ನೀಡಿದರು.
ಸ್ವ ನಿರ್ಬಂಧ ಹಾಕಿಕೊಳ್ಳದ ಜಗತ್ತಿನ ಅನೇಕ ದೇಶಗಳು ಇಂದು ಕೊರಗುತ್ತಿರುವ ಉದಾಹರಣೆ ನಮ್ಮ ಮುಂದಿಯೇ ಇದೆ. ಇದೇ ಕಾರಣಕ್ಕೆ ನಮ್ಮ ಇನ್ನು ಕೆಲ ದಿನ ನಾಗರಿಕರು ತಮಗೆ ತಾವೇ ಲಕ್ಷ್ಮಣ ರೇಖೆಯನ್ನು ಹಾಕಿ ಮನೆಯಲ್ಲಿಯೇ ಇರಿ ಎಂದು ವಿನಂತಿಸಿಕೊಂಡಿದ್ದಾರೆ.