ದಾವಣಗೆರೆ, ಮಾ.29 (Daijiworld News/MB) : ನಾನು ಜನಪ್ರತಿನಿಧಿ, ನನಗೆ ಅಲ್ಲಿ ಹೋಗಬೇಡ, ಇಲ್ಲಿ ಹೋಗಬೇಡ ಎಂದು ಯಾರೂ ಹೇಳುವಂತಿಲ್ಲ. ಯಾರಿಗೂ ನನ್ನ ಪ್ರಶ್ನೆ ಮಾಡುವ ಅಧಿಕಾರವಿಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ರೇಣುಕಾಚಾರ್ಯ ಅವರು ಹೊನ್ನಾಳಿ ಬಿಟ್ಟು ದಾವಣಗೆರೆಗೆ ಬಂದು ಕೊರೊನಾ ವೈರಸ್ ವಿರುದ್ಧ ಜಾಗೃತಿ ಮೂಡಿಸುವುದಾಗಿ ಹೇಳಿ ಓಡಾಡುತ್ತಿದ್ದ ಸಂದರ್ಭದಲ್ಲಿ ಅವರನ್ನು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತರಾಟೆಗೆ ತೆಗೆದು ಕೊಂಡಿದ್ದರು.
ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ ಅವರು, ನಾನು, ಮೇಯರ್ ಸಂಸದರ ಮನೆಗೆ ಹೋಗಿದ್ದೇವೆ. 10 ಅಡಿ ದೂರ ನಿಂತು ಆರೋಗ್ಯ ವಿಚಾರಿಸಿದೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಹಾಗೆಯೇ ಈ ಸಂದರ್ಭದಲ್ಲಿ ಅವರನ್ನು ಸಮರ್ಥನೆ ಮಾಡಿದ ಮೇಯರ್ ಬಿ.ಜಿ. ಅಜಯ ಕುಮಾರ್ ರೇಣುಕಾಚಾರ್ಯ ಅವರು ಮುಖ್ಯಮಂತ್ರಿಗಳ ಕಾರ್ಯದರ್ಶಿ. ಅವರು ರಾಜ್ಯದ ಎಲ್ಲಕಡೆ ಹೋಗಬಹುದು ಎಂದರು.
ಕೊರೊನಾ ವೈರಸ್ ಕುರಿತಾಗಿ ಜಾಗೃತಿ ಮೂಡಿಸುವುದಾಗಿ ಹೇಳಿ ಹೊನ್ನಾಳಿಯಿಂದ ದಾವಣಗೆರೆಗೆ ಬಂದಿದ್ದ ರೇಣುಕಾಚಾರ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು, "ಹೊನ್ನಾಳಿ ಬಿಟ್ಟು ಯಾಕೆ ಬಂದ್ರಿ. ಬರಬೇಡಿ ಎಂದು ಹೇಳಿದ್ರೂ ಕೇಳಲ್ಲ ಅಲ್ವಾ? ಎಂದಿದ್ದರು. ಹಾಗೆಯೇ ಮೇಯರ್ ಅಜಯ್ ಕುಮಾರ್ ಅವರಲ್ಲಿ "ಯಾಕೆ ಅವರನ್ನು ಕರೆಸಿದ್ದೀರಿ? ಅವರು ಅಲ್ಲಿರಬೇಕು. ಸುತ್ತಾಡಬಾರದು. ನಿಮ್ಮನ್ನು ಮನೆಯಲ್ಲಿ ಕೂಡಿ ಹಾಕಬೇಕು. ಆಗ ಸರಿಯಾಗ್ತದೆ ಎಂದು ಹೇಳಿದ್ದರು.