ಬೆಂಗಳೂರು, ಮಾ.29 (Daijiworld News/MB) : ಉಪ ಮುಖ್ಯಮಂತ್ರಿ ಮತ್ತು ಸಚಿವರ ಮಧ್ಯೆ ಕೊರೊನಾ ನಿಯಂತ್ರಣ ವಿಚಾರದಲ್ಲಿ ಸಮನ್ವಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಭಾನುವಾರ ವಿಧಾನಸೌಧದಲ್ಲಿ ನಡೆದ ಸರ್ವ ಪಕ್ಷಗಳ ನಾಯಕರ ಸಭೆಯಲ್ಲಿ ಮಾತನಾಡಿದ ಅವರು, ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿ ಜನರಲ್ಲಿ ಗೊಂದಲ, ಭಯ ಉಂಟು ಮಾಡುತ್ತಿದ್ದಾರೆ. ನಾನು ಅವರ ಹೆಸರು ಹೇಳಲು ಹೋಗುವುದಿಲ್ಲ. ಆದರೆ ಮುಖ್ಯಮಂತ್ರಿ ಆಗಿರುವ ನೀವು ಅವರಲ್ಲಿ ಸಮನ್ವಯ ತರಬೇಕು, ಅದು ನಿಮ್ಮ ಜವಾಬ್ದಾರಿ. ಇಲ್ಲದ್ದಿದ್ದಲ್ಲಿ ಜನರು ಇನ್ನಷ್ಟು ಆತಂಕದಲ್ಲಿ ಇರುತ್ತಾರೆ ಎಂದು ಯಡಿಯೂರಪ್ಪ ಅವರಿಗೆ ತಿಳಿಸಿದರು.
ನಾವು ಕೊರೊನಾ ವಿಷಯದಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ. ನಮ್ಮ ಪಕ್ಷ ಮತ್ತು ವೈಯಕ್ತಿಕವಾಗಿ ನಾನು ಸರ್ಕಾರದ ಎಲ್ಲ ಸಕಾರಾತ್ಮಕ ಕ್ರಮಗಳಿಗೆ ಬೆಂಬಲ ನೀಡುತ್ತೇನೆ ಎಂದೂ ಅವರು ತಿಳಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯ ನಿಯಮಗಳಿಗೆ, ಮಾರ್ಗಸೂಚಿಗಳಿಗೆ ಅನುಗುಣವಾಗಿ ಕೊರೊನಾ ನಿಯಂತ್ರಣ, ಪರಿಸ್ಥಿತಿ ನಿರ್ವಹಣೆಗೆ ಸರ್ಕಾರದ ಕ್ರಮಗಳು ಇರಬೇಕು. ಬದಲಾಗಿ ಸರಕಾರದ ಪ್ರತಿನಿಧಿಗಳ, ಯಾವುದೋ ರಾಜಕೀಯ ಪಕ್ಷದ ತತ್ವ, ಸಿದ್ಧಾಂತ, ರಾಜಕೀಯ ಲಾಭಕ್ಕೆ ಬಳಕೆಯಾಗಬಾರದು. ಕೊರೊನಾವು ಇಡೀ ರಾಜ್ಯದ, ದೇಶದ, ವಿಶ್ವದ ಸಮಸ್ಯೆಯಾಗಿದೆ. ಬರೀ ಆಡಳಿತ ನಡೆಸುವ ಸರ್ಕಾರದ ಸಮಸ್ಯೆಯಲ್ಲ. ಈ ವಿಚಾರದಲ್ಲಿ ಯಾರೂ ಕೂಡಾ ಹೆಚ್ಚು ಕಡಿಮೆ ಎಂಬುವುದು ಇಲ್ಲ. ಎಲ್ಲರೂ ಒಟ್ಟಾಗಿ ಹೋರಾಟ ನಡೆಸಬೇಕು ಎಂದರು.
ಹಾಗೆಯೇ ಹಲವು ಮಂದಿಗೆ ಮಾಸ್ಕ್ ಲಭ್ಯವಾಗುತ್ತಿಲ್ಲ. ಸಾಮಾನ್ಯ ಜನ, ಕೊರೊನಾ ಸೋಂಕು ನಿವಾರಣೆಗೆ ಹೋರಾಡುತ್ತಿರುವ ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಪೌರಕಾರ್ಮಿಕರಿಗೂ ಮಾಸ್ಕ್ ದೊರೆಯುತ್ತಿಲ್ಲ. ರಕ್ಷಕರಿಗೆಯೇ ರಕ್ಷಣೆ ಇಲ್ಲದಿದ್ದರೆ ಹೇಗೆ?. ಮಾಸ್ಕ್ ಉಚಿತವಾಗಿ ಒದಗಿಸುವ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಆದರೆ ಜನರು ದಿನನಿತ್ಯದ ವಸ್ತುಗಳು, ಆಹಾರ ಸಿಗದೆ ಸಂಕಷ್ಟದಲ್ಲಿದ್ದಾರೆ. ಇಲ್ಲಿ ಇರಲೂ ಆಗದೆ, ತಮ್ಮೂರಿಗೆ ಹೋಗಲು ಆಗದೆ ಕಂಗಾಲಾಗಿದ್ದಾರೆ. ಹಾಗಾಗಿ ಈ ಕುರಿತು ಸರ್ಕಾರ ಗಮನ ಹರಿಸಿ ಸರಿಯಾದ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.