ನವದೆಹಲಿ, ಮಾ 29 (Daijiworld News/MSP): "ದೇಶದ ಮುಂದಿರುವ ಕೊರೊನಾ ಎಂಬ ಪ್ರಚಂಡ ಸವಾಲನ್ನು ಎದುರಿಸಿಲು ಹಾಗೂ ಅದರ ವಿರುದ್ದ ಹೋರಾಡಿ ಜಯಿಸಲು ನಾವು ಕೇಂದ್ರ ಸರ್ಕಾರದೊಂದಿಗೆ ಜೊತೆಯಾಗಿ ನಿಲ್ಲುತ್ತೇವೆ" ಎಂದು ಕಾಂಗ್ರೆಸ್ ಸಂಸದ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಪತ್ರದಲ್ಲಿ ಕೊರೊನಾ ವಿರುದ್ದ ಹೋರಾಟಕ್ಕೆ ತಮ್ಮ ಸಲಹೆಗಳನ್ನು ನೀಡಿದ್ದು, ಕೊರೊನಾ ಎಂಬ ಸಾಂಕ್ರಾಮಿಕ ರೋಗವನ್ನು ನಿರ್ವಹಿಸಲು ಹಣಕಾಸಿನ ಪ್ಯಾಕೇಜ್ ಘೋಷಿಸುವ ಸರ್ಕಾರದ ನಿರ್ಧಾರವನ್ನು ರಾಹುಲ್ ಇದೇ ವೇಳೆ ಶ್ಲಾಘಿಸಿದ್ದಾರೆ. ಮಾತ್ರವಲ್ಲದೆ "ಸರ್ಕಾರ ಘೋಷಿಸಿರುವ ವಿಶೇಷ ಪ್ಯಾಕೇಜ್’ನ್ನು ತ್ವರಿತವಾಗಿ ಜನರಿಗೆ ತಲುಪಿಸುವುದು ಅಷ್ಟೇ ಮುಖ್ಯವಾಗಿದೆ " ಎಂದು ಪ್ರತಿಪಾದಿಸಿದರು.
"ವೆಂಟಿಲೇಟರ್ಗಳ ಉತ್ಪಾದನೆಯನ್ನು ಹೆಚ್ಚಿಸುವ ಅಗತ್ಯತೆ, ಹೆಚ್ಚಿನ ಪರೀಕ್ಷೆಗಳನ್ನು ನಡೆಸುವುದು ಮತ್ತು ಅಧಿಕ ಸಾಮರ್ಥ್ಯವುಳ್ಳ ಆಸ್ಪತ್ರೆಗಳನ್ನು ಸ್ಥಾಪಿಸುವುದು ಬಹುಮುಖ್ಯವಾಗಿದೆ" ಎಂದು ಅವರು ಪತ್ರದಲ್ಲಿ ಒತ್ತಿ ಹೇಳಿದ್ದಾರೆ.
ಹಠಾತ್ ಲಾಕ್ ಡೌನ್ ಘೋಷಣೆ ಜನಸಾಮಾನ್ಯರಲ್ಲಿ ಗೊಂದಲ ಸೃಷ್ಟಿಸಿದ್ದು, ಭಾರತದ ಪರಿಸ್ಥಿತಿ ಇತರ ದೇಶಗಳಿಗಿಂತ ಭಿನ್ನವಾಗಿದೆ. ದೈನಂದಿನ ಆದಾಯವನ್ನು ಅವಲಂಬಿತವಾಗಿರುವ ಬಡ ಜನರ ಸಂಖ್ಯೆ ಭಾರತದಲ್ಲಿ ಗಣನೀಯವಾಗಿದ್ದು, ಏಕಪಕ್ಷೀಯವಾಗಿ ಚಟುವಟಿಕೆಗಳ ಸ್ಥಗಿತದಿಂದ ಬಡ ಜನರಿಗೆ ತೊಂದರೆಯುಂಟಾಗಿದೆ ಎಂದು ವಿವರಿಸಿದರು.
ಜೊತೆಗೆ ವೈರಸ್ ಹರಡುವುದನ್ನು ನಿಭಾಯಿಸಲು ಹೆಚ್ಚು "ಸೂಕ್ಷ್ಮ" ಮತ್ತು "ಉದ್ದೇಶಿತ" ವಿಧಾನವನ್ನು ಅಳವಡಿಸಿಕೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.