ಬೆಂಗಳೂರು, ಮಾ.29 (DaijiworldNews/PY) : ವಿದೇಶದಿಂದ ಬಂದವರ ಆರೋಗ್ಯ ತಪಾಸಣೆ ಸರಿಯಾಗಿ ಆಗುತ್ತಿಲ್ಲ. ಸರ್ಕಾರ ಮಾಹಿತಿಯೂ ಅಸ್ಪಷ್ಟವಾಗಿದೆ. 23 ಸಾವಿರ ಮಂದಿ ಪೈಕಿ 4,500 ಮಂದಿಯನ್ನು ಇನ್ನೂ ಗುರುತಿಸಬೇಕಾಗಿದೆ ಎಂಬುದಾಗಿ ಸರ್ಕಾರ ಹೇಳಿದೆ. ತಕ್ಷಣ ಅವರನ್ನು ಪತ್ತೆ ಹಚ್ಚಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದಲ್ಲಿ ಭಾನುವಾರ ನಡೆದ ಸರ್ವಪಕ್ಷಗಳ ನಾಯಕರ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ವ್ಯಾಪಕವಾಗಿ ಹರಡದಂತೆ ತಡೆಯುವ ವಿಚಾರದಲ್ಲಿ ನಮ್ಮ ತಪ್ಪಿನಿಂದ ಯಾವುದೇ ತೊಂದರೆ ಆಗದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ನಾವು ಇನ್ನೂ ಮೂರನೇ ಹಂತಕ್ಕೆ ಹೋಗಿಲ್ಲ ಎಂದು ಸಚಿವರು ಹೇಳಿದ್ದಾರೆ. ನಂಜನಗೂಡಿನಲ್ಲಿ ಒಬ್ಬ ವ್ಯಕ್ತಿಗೆ ಸೋಂಕು ತಗುಲಿದೆ. ಆದರೆ, ವಿದೇಶದಿಂದ ಬಂದವರ ಸಂಪರ್ಕ ಆತನಿಗೆ ಇರಲಿಲ್ಲ. ಆದರೂ ಕೊರೊನಾ ಹೇಗೆ ಬಂತು ಎಂಬುದನ್ನು ಪತ್ತೆ ಮಾಡಬೇಕು. ಒಬ್ಬ ವ್ಯಕ್ತಿ ಶಿರಾದಲ್ಲಿಯೂ ಮೃತಪಟ್ಟಿದ್ದಾರೆ. ಈ ಇಬ್ಬರಿಗೂ ಸೋಂಕು ಯಾವ ಹಂತದಲ್ಲಿತ್ತು ಎಂಬುವುದನ್ನು ಹೇಳಬೇಕು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಸೋಂಕು ಹಳ್ಳಿಗಳಿಗೂ ವ್ಯಾಪಿಸದಂತೆ ನೋಡಿಕೊಳ್ಳಬೇಕು. ಸಾಕಷ್ಟು ಪ್ರಮಾಣದಲ್ಲಿ ಮಾಸ್ಕ್, ಸ್ಯಾನಿಟೈಸರ್, ಪಿಪಿಇ, ಟೆಸ್ಟಿಂಗ್ ಕಿಟ್ಗಳು ಇಲ್ಲ. ಬಂದಿರುವುದೂ ಗುಣಮಟ್ಟದಲ್ಲ. ಈಗ ದಾಸ್ತಾನಾಗಿರುವುದು ಯಾವುದಕ್ಕೂ ಸಾಲುತ್ತಿಲ್ಲ. ವೇಗವಾಗಿ ಸೋಂಕು ವ್ಯಾಪಿಸುವ ಸಾಧ್ಯತೆ ಇದೆ. ಆ ಕೆಲಸವನ್ನು ಗಾರ್ಮೆಂಟ್ ಫ್ಯಾಕ್ಟರಿಗಳಿಗೆ ವಹಿಸಬೇಕು. ಮೂರನೇ ಹಂತಕ್ಕೆ ಹೋಗುವುದನ್ನು ತಡೆಯುವ ಹಾಗೂ ಅದನ್ನು ನಿಭಾಯಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆಯಬೇಕಿದೆ ಎಂದು ಹೇಳಿದರು.
ಈಗಾಗಲೇ ಅಗತ್ಯ ಪ್ರಮಾಣದ ಮಾಸ್ಕ್, ಸ್ಯಾನಿಟೈಸರ್ ಇರಬೇಕಿತ್ತು. ವೈದ್ಯರು ಹಾಗೂ ಸಿಬ್ಬಂದಿಯ ಆರೋಗ್ಯ ಕಾಪಾಡುವುದು ನಮ್ಮ ಜವಾಬ್ದಾರಿ. 6,020 ಪಂಚಾಯಿತಿಗಳು ರಾಜ್ಯದಲ್ಲಿವೆ. ಒಬ್ಬ ವೈದ್ಯಕೀಯ ಅಧಿಕಾರಿಯನ್ನು ಒಂದೊಂದು ಪಂಚಾಯಿತಿಗೆ ನೇಮಕ ಮಾಡಬೇಕು. ಪಂಚಾಯಿತಿಗೆ ಒಬ್ಬರಂತೆ ಆಹಾರ, ಕೃಷಿ ಮಾರುಕಟ್ಟೆ ಹಾಗೂ ಕೃಷಿ ಅಧಿಕಾರಿಯನ್ನೂ ನೇಮಿಸಿಬೇಕು. ಪಂಚಾಯಿತಿಗೆ ಒಬ್ಬರಂತೆ ನೇಮಕ ಮಾಡಬೇಕು ಎಂದು ತಿಳಿಸಿದರು.
ಸಾಮಾಜಿಕ ಅಂತರವನ್ನು ಕಾಪಾಡುವುದು ಮುಖ್ಯ. ಅದೇ ರೀತಿಯಾಗಿ ರೈತರ ಹಿತವನ್ನೂ ಕಾಯಬೇಕು. ಮುಂಗಾರು ಪೂರ್ವ ಬಿತ್ತನೆ ಎಪ್ರಿಲ್, ಮೇ ತಿಂಗಳಲ್ಲಿ ಪ್ರಾರಂಭವಾಗುತ್ತದೆ. ಕೃಷಿ ಚಟುವಟಿಕೆ ನಿಲ್ಲದಂತೆ ಕೆಲವು ಜಿಲ್ಲೆಗಳಲ್ಲಿ ನೋಡಿಕೊಳ್ಳಬೇಕಿದೆ. ಬೀಜ, ಗೊಬ್ಬರ ಬಿತ್ತನೆಗೆ ಮುಂದಾಗುವವರಿಗೆ ಸಿಗುವಂತಾಗಬೇಕು ಎಂದರು.