ಬೆಂಗಳೂರು, ಮಾ.29 (Daijiworld News/MB) : ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಏರಿಕೆಯಾಗಿತ್ತಲ್ಲೇ ಇದ್ದು ಸೋಂಕು ನಿಯಂತ್ರಣಕ್ಕಾಗಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಸರ್ವಪಕ್ಷಗಳ ನಾಯಕರ ಸಭೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜರುಗಿತು.
ಈ ಸಭೆಯಲ್ಲಿ ಕೊರೊನಾ ವೈರಸ್ ನಿಯಂತ್ರಣ ಕುರಿತಾಗಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಅವುಗಳು ಇಂತಿವೆ
ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು, ನರ್ಸ್ಗಳು ಹಾಗೂ ಅರೇ ವೈದ್ಯಕೀಯ ಸಿಬ್ಬಂದಿಗೆ ಪಿಪಿಇ ಕಿಟ್, ಮಾಸ್ಕ್ ಹಾಗೂ ಸ್ಯಾನಿಟೈಜರ್ ಬಾಟಲಿಗಳ ಸರಬರಾಜಿಗೆ ಕೂಡಲೇ ಕ್ರಮ.
ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ರಕ್ಷಣಾ ಸಾಧನಗಳನ್ನು ಒದಗಿಸಲು ಕೂಡಲೇ ಕ್ರಮ.
ಸರ್ವ ಪಕ್ಷಗಳ ಸಭೆಯಲ್ಲಿ ನಾಯಕರು ಉಪಯುಕ್ತ ಸಲಹೆಗಳನ್ನು ನೀಡಿರುತ್ತಾರೆ. ಸರ್ಕಾರ ಅವುಗಳನ್ನು ಗಂಭೀರವಾಗಿ ಪರಿಗಣಿಸಿ ಅನುಷ್ಠಾನಕ್ಕೆ ತರುವುದು.
ಸರ್ವ ಪಕ್ಷದ ಮುಖಂಡರು ಸರ್ಕಾರದ ಕ್ರಮಗಳಿಗೆ ಬೆಂಬಲ ವ್ಯಕ್ತಪಡಿಸಿದ್ದು ಈ ಸಂಕಷ್ಟದ ಸನ್ನಿವೇಶದಲ್ಲಿ ಸರ್ಕಾರದ ಜೊತೆ ಕೈಜೋಡಿಸುವುದಾಗಿ ಸಹಮತ ವ್ಯಕ್ತ.
ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಿಗೆ ಅಗತ್ಯ ಸಂಖ್ಯೆಯಲ್ಲಿ ಟೆಸ್ಟಿಂಗ್ ಕಿಟ್ (ಪರೀಕ್ಷಾ ಸಾಧನಗಳು) ವಿತರಣೆ.
ರೈತರ ಕೃಷಿ ಉತ್ಪನ್ನಗಳ, ಸಾಗಣೆ, ಮಾರಾಟ ಮತ್ತು ಒಳಕೆದಾರರಿಗೆ ಸೂಕ್ತವಾಗಿ ವಿತರಿಸಲು ವ್ಯವಸ್ಥೆ.
ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಇತ್ಯಾದಿಗಳ ವಿತರಣೆ ಸೂಕ್ತ ವ್ಯವಸ್ಥೆ.
ರಾಜ್ಯದ ಗಡಿಗಳಲ್ಲಿ ಸಿಕ್ಕಿಕೊಂಡಿರುವ ಜನರ ವೈದ್ಯಕೀಯ ತಪಾಸಣೆ ನಡೆಸಿ, ಅವರಿಗೆ ಆಶ್ರಯ ಕಲ್ಪಿಸಲು ವ್ಯವಸ್ಥೆ.
ಸೋಂಕಿಗೊಳಗಾಗಿರುವ ಪ್ರಯಾಣಿಕರಿಗೆ ಕ್ವಾರಂಟೈನ್ ವ್ಯವಸ್ಥೆಗೆ ಒಳಪಡಿಸಲು ಹಾಗೂ ಆರೋಗ್ಯವಾಗಿರುವ ಪ್ರಯಾಣಿಕರನ್ನು ಅವರ ಸ್ಥಳಗಳಿಗೆ ತಲುಪಿಸಲು ಕ್ರಮ.
ಪಡಿತರವನ್ನು ಫಲಾನುಭವಿಗಳ ಮನೆಬಾಗಿಲಿಗೆ ತಲುಪಿಸುವ ಸಲಹೆಯನ್ನು ವಿರೋಧ ಪಕ್ಷದ ನಾಯಕರು ನೀಡಿದ್ದು, ಆ ಬಗ್ಗೆ ಪರಿಶೀಲನೆ ನಡೆಸಿ ಕ್ರಮ.
ಮುಸ್ಲಿಂ ಬಾಂಧವರ ಜೊತೆ ನಾನು ಸಭೆ ನಡೆಸಿದ್ದು, ಅವರೆಲ್ಲರೂ ತಮ್ಮ ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆಯನ್ನು ನಡೆಸಲು ಒಪ್ಪಿ ಸಹಕರಿಸಿರುತ್ತಾರೆ ಅವರನ್ನು ಅಭಿನಂದನೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.