ಬೆಂಗಳೂರು, ಮಾ.30 (Daijiworld News/MB) : ರಾಜ್ಯದಲ್ಲಿ ಭಾನುವಾರ ಎರಡು ಕೊರೊನಾ ಪ್ರಕರಣಗಳು ವರದಿಯಾಗಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 83 ಕ್ಕೆ ಏರಿಕೆಯಾಗಿದೆ.
ಮಾರ್ಚ್ 9 ಕ್ಕಿಂತ ಬೆಂಗಳೂರಿನಲ್ಲಿ ಮೊದಲು ಕಾಣಿಸಿಕೊಂಡಿದ್ದ ಈ ಸೋಂಕು ವಿವಿಧ ಜಿಲ್ಲೆಗಳಿಗೆ ವ್ಯಾಪಿಸಿಕೊಳ್ಳುವ ಜತೆಗೆ ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು ಶನಿವಾರ ಒಂದೇ ದಿನ 17 ಪ್ರಕರಣಗಳು ವರದಿಯಾಗಿದ್ದವು. ಇದರಿಂದ ಸೋಂಕು ಸಮುದಾಯಕ್ಕೆ ಹರಡುವ ಆತಂಕವಿತ್ತು. ಆದರೆ, ಭಾನುವಾರ ಎರಡು ಪ್ರಕರಣಗಳು ಮಾತ್ರ ವರದಿಯಾಗಿವೆ.
ಈ ಇಬ್ಬರು ಕೂಡಾ ಉಡುಪಿಯವರಾಗಿದ್ದು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಸೋಂಕು ಇರುವ ಶಂಕೆಯಿಂದಾಗಿ 80 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿಕೊಂಡು, ಅವರ ರಕ್ತ ಹಾಗೂ ಗಂಟಲಿನ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ರಾಜ್ಯದಲ್ಲಿ ಈವರೆಗೆ ಈ ಸೋಂಕಿನಿಂದಾಗಿ 3 ಮಂದಿ ಮೃತಪಟ್ಟಿದ್ದು ಐವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಬೆಂಗಳೂರಿನಲ್ಲಿ 41, ಚಿಕ್ಕಬಳ್ಳಾಪುರ 8, ಮೈಸೂರು 8, ದಕ್ಷಿಣ ಕನ್ನಡ 7, ಉತ್ತರ ಕನ್ನಡ 7, ಕಲಬುರ್ಗಿ 3, ದಾವಣಗೆರೆ 3, ಉಡುಪಿ 3, ಕೊಡಗು 1, ಧಾರವಾಡ 1, ತುಮಕೂರು 1 ಪ್ರಕರಣಗಳು ದಾಖಲಾಗಿದೆ.