ಮುಂಬೈ, ಮಾ.30 (Daijiworld News/MB) : ಪೊಲೀಸರು ಮುಂಬೈನಲ್ಲಿ ಹಲವೆಡೆ ದಾಳಿ ಮಾಡಿದ್ದು ಅಕ್ರಮವಾಗಿ ದಾಸ್ತಾನು ಮಾಡಿಟ್ಟಿದ್ದ 1 ಕೋಟಿ ರೂ. ಮೌಲ್ಯದ ಮಾಸ್ಕ್ ಮತ್ತು 7 ಲಕ್ಷ ರೂ.ಗಳ ಬೆಲೆಯ ಹ್ಯಾಂಡ್ ಸ್ಯಾನಿಟೈಸರ್ಗಳನ್ನು ವಶಪಡಿಸಿಕೊಂಡಿದ್ದಾರೆ, 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೊರೊನಾ ಹರಡುತ್ತಿರುವ ಹಿನ್ನಲೆಯಲ್ಲಿ ಮಾಸ್ಕ್, ಸ್ಯಾನಿಟೈಸರ್ಗಳಿಗೆ ಭಾರೀ ಬೇಡಿಕೆ ಉಂಟಾಗಿದೆ. ಆದ್ದರಿಂದ ಅಗತ್ಯ ವಸ್ತುಗಳಾದ ಇದನ್ನು ದುಬಾರಿ ಬೆಲೆಗೆ ಮಾರಾಟ ಮಾಡಿ ಏಕಾಏಕಿ ದೊಡ್ಡ ಲಾಭ ಗಳಿಸುವ ಉದ್ದೇಶದಿಂದಾಗಿ ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ಗಳನ್ನು ದಾಸ್ತಾನಿರಿಸಲಾಗಿದ್ದು, ಈ ಹಿನ್ನಲೆಯಲ್ಲಿ ಶನಿವಾರ ಗೋರೆಗಾಂವ್ ಪೂರ್ವ, ಮನ್ಖುರ್ಡ್ ಮತ್ತು ಧಾರವಿ ಪ್ರದೇಶಗಳಲ್ಲಿರುವ ಗೋದಾಮುಗಳಿಗೆ ದಾಳಿ ಮಾಡಿದ ಪೊಲೀಸರು 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಮೊದಲು ಕ್ರೈಂ ಬ್ರಾಂಚ್ ಪೊಲೀಸರು ಗೋರೆಗಾಂವ್ ಪೂರ್ವದ ಗೋಕುಲ್ಧಾಮ್ ಪ್ರದೇಶದ ಅಂಗಡಿಯೊಂದರ ಮೇಲೆ ಮೊದಲ ದಾಳಿ ನಡೆಸಿದ್ದು ಅಲ್ಲಿ 2.22 ಲಕ್ಷ ರೂ. ಮೌಲ್ಯದ 614 ಸ್ಯಾನಿಟೈಸರ್ ಬಾಟಲಿಗಳನ್ನು ವಶಕ್ಕೆ ಪಡೆಯಲಾಗಿದೆ. ಹಾಗೆಯೇ ಅಂಗಡಿ ಮಾಲೀಕ ಭಾರತ್ ದುಬರಿಯಾ ಎಂಬವರನ್ನು ದಿಂಡೋಶಿ ಪೊಲೀಸ್ ಠಾಣೆಗೆ ಹಸ್ತಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿರಿಯ ಇನ್ಸ್ಸ್ಪೆಕ್ಟರ್ ಸುನೀಲ್ ಮಾನೆ ನೇತೃತ್ವದ ಯುನಿಟ್ ಎಕ್ಸ್ ತಂಡವು ಮಾನ್ಖರ್ಡ್ನ ಬೈಂಗನ್ವಾಡಿಯಲ್ಲಿರುವ ಗೋದಾಮಿನ ಮೇಲೆ ದಾಳಿ ನಡೆಸಿದ್ದು 74.90 ಮೌಲ್ಯದ 2,97,800 ಮಾಸ್ಕ್ಗಳನ್ನು ವಶಪಡಿಸಿ ಓರ್ವ ಮಹಿಳೆ ಸೇರಿದಂತೆ ನಾಲ್ವರನ್ನು ಬಂಧನ ಮಾಡಿದ್ದಾರೆ.
ಹೀಗೆ ಹಲವು ಕಡೆಗಳಲ್ಲಿ ದಾಳಿ ಮಾಡಿ ಒಟ್ಟು 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.