ನವದೆಹಲಿ, ಮಾ 30 (Daijiworld News/MSP) : ಏ.14 ರ ನಂತರವೂ ಲಾಕ್ ಡೌನ್ ಮುಂದುವರಿಸುವ ಯಾವುದೇ ಯೋಚನೆ ಕೇಂದ್ರದ ಮುಂದಿಲ್ಲ. ಆದರೆ ಆ ಬಳಿಕವೂ ಲಾಕ್ ಡೌನ್ ಮುಂದುವರಿಯಲಿದೆ ಎನ್ನುವ ಸುದ್ದಿ ಹರಿದಾಡುತ್ತಿರುವುದು ಆಶ್ಚರ್ಯ ತಂದಿದೆ. ಏ.15 ರ ಬಳಿಕ ಲಾಕ್ ಡೌನ್ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿದೆ.
೨೧ ದಿನಗಳ ಲಾಕ್ಡೌನ್ನ 6 ನೇ ದಿನಕ್ಕೆ ಕಾಲಿಡುತ್ತಿದ್ದಂತೆ ಈ ಕುರಿತಂತೆ ಕೇಂದ್ರ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬ ಮಾತನಾಡಿ , ವದಂತಿಗಳು ಮತ್ತು ಮಾಧ್ಯಮ ವರದಿಗಳು ಲಾಕ್ ಡೌನ್ ವಿಸ್ತರಣೆಗೊಳ್ಳಲಿದೆ ಎಂಬುದಾಗಿ ಹೇಳುತ್ತದೆ, ಇದು ಆಧಾರರಹಿತವಾಗಿವೆ. ಈ ರೀತಿಯ ಯಾವುದೇ ನಿರ್ಧಾರ ಸರ್ಕಾರದ ಮುಂದಿಲ್ಲ. ಹೀಗಾಗಿ ಏ.14ಕ್ಕೆ ದೇಶಾದ್ಯಂತ ಲಾಕ್ ಡೌನ್ ಕೊನೆಗೊಳ್ಳಲಿದೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ದೇಶಾದ್ಯಂತ 21 ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಿದ್ದರು. ಏಪ್ರಿಲ್ 14ರ ವರೆಗೆ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಈ ನಿಯಮ ಮತ್ತೆ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಮತ್ತೆ ವಿಸ್ತರಣೆಯಾಗಲಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿತ್ತು. ಆದರೆ ಇಂತಹ ಊಹಾಪೋಹಗಳಿಗೆ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬ ಸ್ಪಷ್ಟನೆ ನೀಡುವುದರ ಮೂಲಕ ತೆರೆ ಎಳೆದಿದ್ದಾರೆ.