ತಿರುವನಂತಪುರ, ಮಾ 30 (Daijiworld News/MSP) : ಲಾಕ್ ಡೌನ್ ಬಳಿಕ ಮುಚ್ಚಿದ ವೈನ್ ಶಾಪ್ ಗಳಿಂದ ಕೇರಳದಾದ್ಯಂತ ಮದ್ಯ ಸಿಗದೆ ಮದ್ಯವ್ಯಸನಿಗಳು ಆತ್ಮಹತ್ಯೆ ಮಾಡುತ್ತಿರುವ ಹಿನ್ನಲೆಯಲ್ಲಿ, ವೈದ್ಯರಿಂದ ಪ್ರಿಸ್ಕ್ರಿಪ್ಷನ್ ಇರುವವರಿಗೆ ಮದ್ಯವನ್ನು ಒದಗಿಸುವಂತೆ ರಾಜ್ಯ ಅಬಕಾರಿ ಇಲಾಖೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೂಚನೆ ನೀಡಿದ್ದಾರೆ.
ತಮಗೆ ಮದ್ಯ ಬೇಕು ಎಂದು ಹಲವರು ವಿಡಿಯೋ ಮಾಡಿ ಕಳುಹಿಸುತ್ತಿದ್ದಾರೆ. ಇದರ ಜೊತೆಗೆ ಮದ್ಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನು ಸಹ ಹಾಕುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾದವರು ಮತ್ತು ಆತ್ಮಹತ್ಯೆಗೆ ಯತ್ನಿಸಿದವರಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಲಾಗುವುದು. ಕುಡಿತ ಚಟಕ್ಕೆ ಒಳಗಾದವರಿಗೆ ವ್ಯಸನ ಮುಕ್ತ ಕೇಂದ್ರಗಳಲ್ಲಿ ಅಬಕಾರಿ ಇಲಾಖೆಯಿಂದ ಚಿಕಿತ್ಸೆ ನೀಡಲಾಗುವುದು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಇನ್ನು ಹಠಾತ್ತನೆ ಮದ್ಯ ಲಭ್ಯವಿಲ್ಲದಿರುವುದು ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬ ಕಾರಣಕ್ಕೆ ಆನ್ಲೈನ್ ಮದ್ಯ ಮಾರಾಟದ ಬಗ್ಗೆ ಸರ್ಕಾರ ಚಿಂತಿಸುತ್ತಿದೆ ಎಂದು ಸಿಎಂ ಹೇಳಿದ್ದಾರೆ.
ಕರ್ನಾಟಕದಲ್ಲೂ, ಮದ್ಯವ್ಯಸನಿಗಳ ಆತ್ಮಹತ್ಯೆಗಳ ವರದಿಯಾಗಿವೆ. ಏತನ್ಮಧ್ಯೆ, ಸರ್ಕಾರದ ನಕಲಿ ಆದೇಶ ಪತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪ್ರತಿದಿನ ಮಧ್ಯಾಹ್ನ 2.30 ರಿಂದ ಸಂಜೆ 6 ರವರೆಗೆ ರಾಜ್ಯಾದ್ಯಂತ ವೈನ್ ಅಂಗಡಿಗಳನ್ನು ತೆರೆಯುವಂತೆ ಕರ್ನಾಟಕ ರಾಜ್ಯ ಅಬಕಾರಿ ಇಲಾಖೆಗೆ ನಿರ್ದೇಶನ ನೀಡಿದ ಬಗ್ಗೆ ನಕಲಿ ಪತ್ರದಲ್ಲಿ ತಿಳಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ವೈರಲ್ ಆಗಿರುವ ಆದೇಶವನ್ನು ನಕಲಿ ಎಂದು ಸ್ಪಷ್ಟಪಡಿಸಿದ್ದು ಅಂತಹ ಯಾವುದೇ ನಿರ್ಧಾರವು ಇಲಾಖೆ ಮುಂದಿಲ್ಲ ಎಂದು ಹೇಳಿದೆ.