ನವದೆಹಲಿ, ಮಾ 30 (Daijiworld News/MSP): ಮಾರಣಾಂತಿಕ ಕೊರೋನ ವೈರಸ್ ಹರಡುವುದನ್ನು ತಡೆಗಟ್ಟಲು ಕರ್ನಾಟಕ ಸರ್ಕಾರ ರಾಜ್ಯದ ಎಲ್ಲಾ ಗಡಿಗಳನ್ನು ಮುಚ್ಚಿದ್ದು, ಇದೇ ಹಿನ್ನಲೆಯಲ್ಲಿ ಕೇರಳ ಸಂಪರ್ಕಿಸುವ ಹೆದ್ದಾರಿಯನ್ನು ಮುಚ್ಚಿರುವುದನ್ನು ಪ್ರಶ್ನಿಸಿ ಕಾಸರಗೋಡು ಸಂಸದ ರಾಜ್ ಮೋಹನ್ ಉನ್ನಿತ್ತಾನ್ ಸೋಮವಾರ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ.
ಕರ್ನಾಟಕವೂ ಮುಚ್ಚಿರುವ ಕೇರಳ ಸಂಪರ್ಕದ ಹೆದ್ದಾರಿಯನ್ನು ತೆರವುಗೊಳಿಸುವಂತೆ ಮತ್ತು ಕರ್ನಾಟಕ ಸರಕಾರದ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಸಂಸದ ಉನ್ನಿತ್ತಾನ್ ಅವರು ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ.
ಇದರೊಂದಿಗೆ ಕೇರಳದಿಂದ ರೋಗಿಗಳನ್ನು ಕರ್ನಾಟಕದ ಆಸ್ಪತ್ರೆಗಳಿಗೆ ಕರೆದೊಯ್ಯುವ ಅಂಬ್ಯುಲೆನ್ಸ್ ಗಳಿಗೂ ಕರ್ನಾಟಕ್ಕೆ ಪ್ರವೇಶ ನಿರಾಕರಿಸಲಾಗುತ್ತಿದೆ. ಹೀಗಾಗಿ ಸೂಕ್ತ ಚಿಕಿತ್ಸೆ ದೊರೆಯದೆ ಇಬ್ಬರು ನಾಗರೀಕರು ಮೃತಪಟ್ಟಿದ್ದಾರೆ. ಇಬ್ಬರು ನಾಗರಿಕರ ಸಾವಿಗೆ ಕಾರಣವಾದ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧಎಫ್ಐಆರ್ ದಾಖಲಿಸಿ ಮತ್ತು ವಿಶೇಷ ತನಿಖಾ ತಂಡವನ್ನು ರಚಿಸಲು ಇದೇ ವೇಳೆ ಕೋರಿದ್ದಾರೆ.
ಮಾತ್ರವಲ್ಲದೆ ಕರ್ನಾಟದ ಗಡಿಗಳ ಮೂಲಕ ಆಂಬ್ಯುಲೆನ್ಸ್ ಮತ್ತು ಇತರ ತುರ್ತು ವಾಹನಗಳ ಸಂಚಾರಕ್ಕೆ ಹಾಗೂ ಅನಿವಾರ್ಯ ವಸ್ತುಗಳನ್ನು ಕೇರಳ ರಾಜ್ಯಕ್ಕೆ ಸಾಗಿಸುವ ಟ್ರಕ್ಗಳು ಮತ್ತು ಇತರ ವಾಹನಗಳ ಸಂಚಾರಕ್ಕೆ ಅನುಮತಿ ನೀಡುವಂತೆ ಸುಪ್ರಿಂ ಕೋರ್ಟ್ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.