ವಿಜಯಪುರ, ಮಾ.30 (Daijiworld News/MB) : ಕೊರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಹೇರಿರುವ ನಿರ್ಬಂಧವನ್ನು ಉಲ್ಲಂಘನೆ ಮಾಡಿ ಅನಗತ್ಯವಾಗಿ ರಸ್ತೆಗೆ ಇಳಿಯುತ್ತಿರುವ ಬೈಕ್ ಸವಾರರನ್ನು ನಿಯಂತ್ರಣ ಮಾಡುವ ಸಲುವಾಗಿ ವಿಜಯಪುರ ಪೊಲೀಸರು ಕುಂಕುಮ ಹಚ್ಚಿ ಮಂಗಳಾರತಿ ಬೆಳಗುವ ಮೂಲಕ ಮುಜುಗುರಕ್ಕೆ ಒಳಗಾಗುವಂತೆ ಮಾಡಿದ್ದಾರೆ.
ಈ ಮೊದಲು ಲಾಕ್ ಡೌನ್ ಇದ್ದರೂ ಬೀದಿಯಲ್ಲಿ ಓಡಾಡುತ್ತಿದ್ದ ಹುಡುಗರಿಗೆ ಲಾಠಿ ಬೀಸಿದ್ದರು. ಇದಕ್ಕೂ ಬಗ್ಗದಿದ್ದಾಗ ಲಾಠಿ ಏಟಿನೊಂದಿಗೆ ಬಸ್ಕಿ ಹೊಡೆಯುವ ಶಿಕ್ಷೆ ಕೊಟ್ಟಿದ್ದರು. ಆ ಬಳಿಕ ಕೇಶು ದಾಖಲಿಸಿ ಬೈಕ್ ವಶಕ್ಕೆ ಪಡೆದಿದ್ದರು. ಒಟ್ಟು 393 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಹಾಗಿದ್ದರೂ ಲಾಕ್ಡೌನ್ ಉಲ್ಲಂಘನೆ ಮಾಡಿ ರಸ್ತೆಗೆ ಬರುವವರ ಸಂಖ್ಯೆ ಕಡಿಮೆಯಾಗಿಲ್ಲ.
ಈ ಕಾರಣದಿಂದಾಗಿ ಅನಗತ್ಯ ಬೀದಿ ಸುತ್ತುವ ಬೈಕ್ ಸವಾರರು, ವಾಹನ ಚಾಲಕರು, ಪ್ರಯಾಣಿಕರಿಗೆ ಭಾನುವಾರ ನಾನು ಸಮಾಜ ವಿರೋಧಿ, ನನ್ನನ್ನು ಕ್ಷಮಿಸಿ ಎಂದು ಹಣೆಗೆ ಸ್ಟ್ಯಾಂಪಿಗ್ ಸೀಲ್ ಹಾಕಿದ್ದರು. ಇದಕ್ಕೂ ಬಗ್ಗದಿದ್ದಾಗ ಗಾಂಧಿ ಚೌಕ್ ಠಾಣೆ ಸಿಪಿಐ ನಾಯ್ಕೋಡಿ, ಎಸೈ ಆರೀಫ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.
ರಸ್ತೆಗೆ ಬರುವ ಬೈಕ್ ಸವಾರರ ಹಣೆಗೆ ಕುಂಕುಮ ಇರಿಸಿ, ಊದಬತ್ತಿಯ ಹೊಗೆ ಹಾಕಿ, ಮಂಗಳಾರತಿ ಮಾಡುತ್ತಿದ್ದಾರೆ.
ಇನ್ನಾದರೂ ಜನರು ಬೀದಿಯಲ್ಲಿ ಸುತ್ತಾಡುವುದು ಕಡಿಮೆಯಾಗಲಿ ಎಂಬುದು ಪೊಲೀಸರ ಆಶಯ.