ಬೆಂಗಳೂರು.ಮಾ 30 (Daijiworld News/MSP): ರಾಜ್ಯದ ಕೆಲ ಖಾಸಗಿ ಶಾಲೆಗಳು ವಿದ್ಯಾರ್ಥಿಗಳ 2020-21ನೇ ಸಾಲಿನ ಪ್ರವೇಶಾತಿ ಶೈಕ್ಷಣಿಕ ಶುಲ್ಕ ಕಟ್ಟುವಂತೆ ವಿದ್ಯಾರ್ಥಿಗಳ ಪೋಷಕರಿಗೆ ಸೂಚಿಸಿದ್ದು ತಕ್ಷಣ ಈ ಆದೇಶವನ್ನು ಹಿಂಪಡೆಯಬೇಕು. ಇಲ್ಲವೇ ತಾತ್ಕಾಲಿಕವಾಗಿ ಮುಂದೂಡಬೇಕು. ಇಲ್ಲವಾದ್ರೆ ಅಂತಹ ಶಾಲೆಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ ಎಂಬುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಹಿನ್ನಲೆಯಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಹೀಗಿದ್ದೂ ರಾಜ್ಯದ ಕೆಲ ಖಾಸಗೀ ಶಾಲೆಗಳು 2019-20ನೇ ಸಾಲಿನ ವಿದ್ಯಾರ್ಥಿಗಳು ತೇರ್ಗಡೆಗೊಂಡು 2020-21ನೇ ಸಾಲಿಗೆ ಶುಲ್ಕ ಕಟ್ಟುವಂತೆ ವಿದ್ಯಾರ್ಥಿಗಳ ಪೋಷಕರಿಗೆ ಸೂಚಿಸಿದೆ. ಈ ಹಿನ್ನಲೆಯಲ್ಲಿ ಸುತ್ತೋಲೆ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು, ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳು 2020-21ನೇ ಸಾಲಿನ ಮಕ್ಕಳ ದಾಖಲಾತಿಯನ್ನು ಸರ್ಕಾರ ಮುಂದಿನ ಆದೇಶವರೆಗೆ ಮುಂದೂಡುವಂತೆ ಈಗಾಗಲೇ ಸೂಚಿಸಲಾಗಿತ್ತು. ಅದರೂ ಅದೇ ಶಾಲೆಯ ಮುಂದಿನ ತರಗತಿಗೆ ದಾಖಲಾಗುವ ವಿದ್ಯಾರ್ಥಿಗಳ ಶುಲ್ಕವನ್ನು ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಪಾವತಿಸಲು ಕೊನೆಯ ದಿನಾಂಕವನ್ನು ನಿಗಧಿಪಡಿಸಿ, ಪೋಷಕರಿಗೆ ಪತ್ರ ಮುಖೇನ, ಇಮೇಲ್ ಮತ್ತು ಎಸ್ ಎಂ ಎಸ್ ಮೂಲಕ ರವಾನಿಸಿ, ಶುಲ್ಕ ಪಾವತಿಸುವಂತೆ ಒತ್ತಡ ತರುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.
ಶಾಲೆಗಳು ಇಂತಹ ಆದೇಶ ನೀಡಿದ್ದರೆ ತಕ್ಷಣ ಹಿಂಪಡೆಯಬೇಕು ಇಲ್ಲವಾದರೆ ಕ್ರಿಮಿನಲ್ ಮೊಕದ್ದಮೆ ಹಾಗೂ ಶಿಕ್ಷಣ ಕಾಯ್ದೆಯ ಅಡಿಯಲ್ಲಿ ಸಂಬಂಧಪಟ್ಟ ಶಾಲೆಗಳ ಮಾನ್ಯತೆಯನ್ನು ರದ್ದುಪಡಿಸುವ ಬಗ್ಗೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.