ಸೂರತ್, ಮಾ.30 (Daijiworld News/MB) : ಲಾಕ್ಡೌನ್ ಉಲ್ಲಂಘಿಸಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಗುಜರಾತ್ನ ಸೂರತ್ನಲ್ಲಿ 93 ವಲಸೆ ಕಾರ್ಮಿಕರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಮಾರು 500 ಜನ ಕಾರ್ಮಿಕರು ಸೂರತ್ನ ಗಣೇಶ ನಗರ ಮತ್ತು ತಿರುಪತಿ ನಗರ ಪ್ರದೇಶಗಳಲ್ಲಿ ಭಾನುವಾರ ಮಧ್ಯಾಹ್ನ ತಮ್ಮ ಊರುಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದ್ದರು. ಈ ಸಂದರ್ಭದಲ್ಲಿ ಹಲ್ಲೆ ನಡೆದಿದೆ ಎಂದು ಡಿಸಿಪಿ ವಿಧಿ ಚೌಧರಿ ಹೇಳಿದ್ದಾರೆ.
ವಲಸೆ ಕಾರ್ಮಿಕರ ಪೈಕಿ ಹೆಚ್ಚಿನವರು ಉತ್ತರ ಪ್ರದೇಶ ಮತ್ತು ಬಿಹಾರದವರಾಗಿದ್ದು, ಇಲ್ಲಿನ ಜವಳಿ ಸಂಸ್ಕರಣಾ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದರು ಎಂದು ಇನ್ನೋರ್ವ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪೊಲೀಸರು ಬೀದಿಗಿಳಿದ ಕಾರ್ಮಿಕರನ್ನು ಒಳಹೋಗುವಂತೆ ಮನವೊಲಿಕೆ ಮಾಡಲು ಮುಂದಾಗಿದ್ದು ಈ ಸಂದರ್ಭದಲ್ಲಿ ಅವರು ಕಲ್ಲುತೂರಾಟ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕೆಲವು ವಾಹನಗಳಿಗೂ ಹಾನಿಯಾಗಿದೆ ಎಂದು ಚೌಧರಿ ತಿಳಿಸಿದ್ದಾರೆ.
ಗಲಭೆ ನಿಯಂತ್ರಿಸಲು ಅಶ್ರುವಾಯು ಸಿಡಿಸಲಾಯಿತು. ಕೆಲವು ದುಷ್ಕರ್ಮಿಗಳನ್ನು ಭಾನುವಾರ ರಾತ್ರಿ ಬಂಧಿಸಿದ್ದೇವೆ. ಇನ್ನು ಕೆಲವರನ್ನು ಇಂದು ಬೆಳಿಗ್ಗೆ ಬಂಧಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.