ಲಕ್ನೋ, ಮಾ.30 (DaijiworldNews/PY) : ದೆಹಲಿ ಸೇರಿದಂತೆ ಬೇರೆ ರಾಜ್ಯಗಳಿಂದ ಉತ್ತರ ಪ್ರದೇಶಕ್ಕೆ ದೇಶದಾದ್ಯಂತ ಲಾಕ್ಡೌನ್ ಇರುವ ಹಿನ್ನೆಲೆಯಲ್ಲಿ ವಾಪಸಾದ ವಲಸೆ ಕಾರ್ಮಿಕರ ಮೇಲೆ ಸೋಂಕು ನಿವಾರಕ ರಾಸಾಯನಿಕ ಸಿಂಪಡಿಸಲಾಗಿದೆ ಎಂದು ವರದಿಯಾಗಿದೆ.
ಟ್ವಿಟರ್ನಲ್ಲಿ ಇದಕ್ಕೆ ಸಂಬಂಧಿಸಿದ್ದು ಎನ್ನಲಾದ ವಿಡಿಯೋ ಒಂದನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹಂಚಿಕೊಂಡಿದ್ದು, ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೊರೊನಾ ಸೋಂಕಿನ ವಿರುದ್ದ ನಾವೆಲ್ಲರೂ ಜೊತೆಯಾಗಿ ಹೋರಾಡುತ್ತಿದ್ದೇವೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. ಆದರೆ, ಈ ವಿಚಾರವಾಗಿ ಪ್ರಿಯಾಂಕ, ದಯವಿಟ್ಟು ಇಂತಹ ಅಮಾನವೀಯ ಕೆಲಸಗಳನ್ನು ಮಾಡಬೇಡಿ. ಈಗಾಗಲೇ ವಲಸೆ ಕಾರ್ಮಿಕರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅವರ ಮೇಲೆ ರಾಸಾಯನಿಕ ಸಿಂಪಡಿಸುವ ಮುಖಾಂತರ ಅವರನ್ನು ಈರೀತಿಯಾಗಿ ನಡೆಸಿಕೊಳ್ಳಬೇಡಿ. ಅವರನ್ನು ಇದು ರಕ್ಷಿಸುವುದಿಲ್ಲ. ಬದಲಾಗಿ ಅವರ ಆರೋಗ್ಯಕ್ಕೆ ಅಧಿಕ ಹಾನಿ ಉಂಟು ಮಾಡುತ್ತದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ವೈರಸ್ ಸೋಂಕು ವ್ಯಾಪಿಸದಂತೆ ದೇಶದಾದ್ಯಂತ 21 ದಿನಗಳ ಲಾಕ್ಡೌನ್ ಘೋಷಿಸಿದ್ದಾರೆ. ಇದರಿಂದಾಗಿ ದೆಹಲಿ ಸೇರಿದಂತೆ ವಿವಿಧೆಡೆ ಸಿಲುಕಿರುವ ವಲಸೆ ಕಾರ್ಮಿಕರನ್ನು ಉತ್ತರ ಪ್ರದೇಶಕ್ಕೆ ಕರೆತರಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದಾಗಿ ಊರು ಸೇರಲಾರದೆ ಗಡಿ ಭಾಗಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು ರಾಜ್ಯಕ್ಕೆ ಮರಳಲು ಅನುವಾಗುವ ನಿಟ್ಟಿನಲ್ಲಿ 1,000 ಬಸ್ಗಳನ್ನು ಕಳುಹಿಸಿಕೊಡಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿತ್ತು.