ಬೆಂಗಳೂರು, ಮಾ 30 (Daijiworld News/MSP): ಕೊರೊನಾದಿಂದ ಆಗಿರುವ ಲಾಕ್ ಡೌನ್ ಹಿನ್ನಲೆಯಲ್ಲಿ ಜನ ಸಂಪಾದನೆ ಇಲ್ಲದೆ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೆಲಸವನ್ನೇ ನಂಬಿ ಜೀವನ ಮಾಡುತ್ತಿರುವ ಅನೇಕರು ಕೈಯಲ್ಲಿ ದುಡ್ಡಿಲ್ಲದೆ ಒತ್ತಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಮನೆ ಬಾಡಿಗೆದಾರರಿಂದ ಮನೆ ಮಾಲೀಕರು ಬಾಡಿಗೆಗಾಗಿ ಒತ್ತಾಯಿಸಿದ್ರೆ ಅವರ ವಿರುದ್ದ ಪ್ರಕರಣ ದಾಖಲಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಪೊಲೀಸರು ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಲಾಕ್ ಡೌನ್ ನಿಂದ ಎಲ್ಲರೂ ಸಂಕಷ್ಟದಲ್ಲಿದ್ದಾರೆ ಹೀಗಾಗಿ ಮನೆ ಬಾಡಿಗೆದಾರರಿಂದ , ಪಿಜಿಯಲ್ಲಿರುವ ಪೇಯಿಂಗ್ ಗೆಸ್ಟ್ ಗಳಿಂದ ಬಾಡಿಗೆ ಹಣಕ್ಕಾಗಿ ಪೀಡಿಸಿದ್ರೆ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ವೈದ್ಯರು, ನರ್ಸ್ ಗಳನ್ನು ಅಥವಾ ಕೊರೊನಾ ವಿರುದ್ದ ಹೋರಡಲು ಕೈ ಜೋಡಿಸಿರುವವರ ಮನೆಯನ್ನು ಖಾಲಿ ಮಾಡಿಸುವಂತಿಲ್ಲಎಂದು ಎಚ್ಚರಿಕೆ ನೀಡಿದರು.
ಈಗಾಗಲೇ ಬಿಬಿಎಂಪಿಯೂ ತನ್ನ ಬಾಡಿಗೆ ಪಡೆಯುವುದಿಲ್ಲ ಎಂದು ತಿಳಿಸಿದೆ. ಹೀಗೆಯೇ ಖಾಸಗಿಯವರು ಸಹ ಬಾಡಿಗೆ , ಅಂಗಡಿ ಬಾಡಿಗೆಗಾಗಿ ಮಾನಸಿಕವಾಗಿ ಕಿರುಕುಳ ಕೊಡುವುದು ಸರಿಯಲ್ಲ ಎಂದು ತಿಳಿಸಿದರು.