ನವದೆಹಲಿ, ಮಾ 31 (Daijiworld News/MSP):ದೆಹಲಿಯ ನಿಜಾಮುದ್ದೀನ್ ಪಶ್ಚಿಮ ಏರಿಯಾದ ಮಸೀದಿಯಲ್ಲಿ ಮಾ.1ರಿಂದ 15ರವರೆಗೆ ನಡೆದ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡಿದ್ದ 6 ಮಂದಿ ತೆಲಂಗಾಣದಲ್ಲಿ ಮೃತಪಟ್ಟಿದ್ದಾರೆ. ಈ ವಿಚಾರವನ್ನು ತೆಲಂಗಾಣ ಆರೋಗ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದೇ ಸಭೆಯಲ್ಲಿ ಭಾಗವಹಿಸಿದ್ದ ಮತ್ತೊಬ್ಬರು ಶ್ರೀನಗದಲ್ಲಿ ಮೃತಪಟ್ಟಿದ್ದಾರೆ. ಹೀಗಾಗಿ ನಿಜಾಮುದ್ದೀನ್ ಮಸೀದಿಯ ಧಾರ್ಮಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಏಳು ಜನ ಮೃತಪಟ್ಟಂತಾಗಿದೆ.
ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ಮುಸ್ಲಿಂ ಧಾರ್ಮಿಕ ಸಂಘಟನೆಯಾದ ತಬ್ಲೀ ಎ ಜಮಾತ್ನಿಂದ ಪ್ರಾರ್ಥನಾ ಸಭೆ ನಡೆದಿತ್ತು. ಇದರಲ್ಲಿ ಭಾರತ ಮಾತ್ರವಲ್ಲದೆ ಇಂಡೋನೇಷಿಯಾ, ಮಲೇಷಿಯಾ, ಸೌದಿ ಅರೇಬಿಯಾ ದೇಶಗಳಿಂದ ಆಗಮಿಸಿದ ಹಲವು ಮಂದಿ ಇದರಲ್ಲಿ ಭಾಗಿಯಾಗಿದ್ದರು. ಒಟ್ಟು 2000 ಜನರು ಭಾಗವಹಿಸಿದ್ದ ಸಭೆಯಲ್ಲಿ 600 ಮಂದಿ ಭಾರತೀಯರೇ ಇದ್ದರು.
ನಿಜಾಮುದ್ದೀನ್ ಪ್ರದೇಶವನ್ನೀಗ ಸಾರ್ವಜನಿಕರಿಗೆ ನಿರ್ಬಂಧಿಸಲಾಗಿದೆ. ಶ್ರೀನಗರದಲ್ಲಿ ಧರ್ಮಗುರು ಕೊರೊನಾದಿಂದ ಮೃತಪಟ್ಟ ವಿಚಾರ ಬಯಲಾಗುತ್ತಿದ್ದಂತೆ, ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿ ಆ ಬಳಿಕ ರೈಲು, ವಿಮಾನಗಳಲ್ಲಿ ತೆರಳಿದವರ ಗುರುತು ಪತ್ತೆಹಚ್ಚಿದ್ದಲ್ಲದೆ, ಅವರ ಸಂಪರ್ಕಕ್ಕೆ ಬಂದವರನ್ನೂ ಟ್ರ್ಯಾಕ್ ಮಾಡಲು ಪ್ರಯತ್ನಿಸಲಾಗುತ್ತಿದೆ.
ಅಂಡಮಾನ್ ನಿಕೋಬಾರ್ನಿಂದ ಧಾರ್ಮಿಕ ಸಭೆಗೆ ಆಗಮಿಸಿದ್ದ 9 ಜನರಿಗೆ ಕರೊನಾ ಇರುವುದು ದೃಢಪಟ್ಟಿದೆ. ಅದರಲ್ಲಿ ಓರ್ವನ ಪತ್ನಿಗೂ ಸೋಂಕು ತಗುಲಿದೆ. ಧಾರ್ಮಿಕ ಸಭೆಯಲ್ಲಿ ಯಾರ್ಯಾರು ಭಾಗವಹಿಸಿದ್ದರೋ ಅವರೆಲ್ಲ ಆಯಾ ಸ್ಥಳೀಯರ ಆಡಳಿತವನ್ನು ಭೇಟಿ ಮಾಡಿ, ಪರೀಕ್ಷೆ ಮಾಡಿಸಿಕೊಳ್ಳಿ ಎಂದು ದೆಹಲಿ ಸರ್ಕಾರ ತಿಳಿಸಿದೆ.