ಬೆಂಗಳೂರು, ಮಾ 31 (Daijiworld News/MSP): ಸಾಮಾಜಿಕ ಜಾಲತಾಣದಲ್ಲಿ ಅಮಾಯಕ ವ್ಯಕ್ತಿಯೊಬ್ಬನಿಗೆ ಕೊರೊನಾ ಸೋಂಕಿದೆ ಎಂದು ಸುಳ್ಳು ಸುದ್ಧಿ ಹರಿಬಿಟ್ಟವನ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದೆ.
ಬಿಬಿಎಂಪಿಯ ಚೌಡೇಶ್ವರಿ ವಾರ್ಡ್-2ರ ಕಾರ್ಪೊರೇಟರ್ ಪದ್ಮಾವತಿಯವರ ಪತಿ ಅಮರ್ ನಾಥ್ ಸುಳ್ಳು ಸುದ್ಧಿ ಹಬ್ಬಿಸಿ ಪೊಲೀಸರ ಅತಿಥಿಯಾಗಿದ್ದಾನೆ. ದೇಶಕ್ಕೆ ದೇಶವೇ ಮಹಾಮಾರಿ ಕೊರೋನಾದ ವಿರುದ್ಧ ಹೋರಾಡಲು ಸಾಕಷ್ಟು ಸಂಕಟ ಪಡುತ್ತಿರುವ ಈ ಸಂದರ್ಭದಲ್ಲಿ ತಾನೊಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯ ಗಂಡ ಎಂಬುದನ್ನೂ ಮರೆತು ಸುಳ್ಳು ಸುದ್ಧಿ ಹರಿಬಿಟ್ಟು ವಿಕೃತಿಯನ್ನು ಮೆರೆದಿರುವುದು ಬೆಳಕಿಗೆ ಬಂದಿದೆ.
ಅಮರ್ ನಾಥ್ ಈ ಹಿಂದೆ ಯಲಹಂಕ ನಗರಸಭೆಯ ಕೌನ್ಸಿಲರ್ ಆಗಿದ್ದಾಗಲೂ ಕೂಡ ಅನೇಕ ಯಡವಟ್ಟುಗಳನ್ನು ಮಾಡಿಕೊಂಡಿದ್ದರು.ಈತ ಹರಡಿಸಿದ ಸುಳ್ಳು ವದಂತಿಯಿಂದಾಗಿ ಆಂಧ್ರ-ತೆಲಂಗಾಣದ ಕೂಲಿಕಾರ್ಮಿಕರು ಭಯಭೀತರಾಗಿ ಗಾಬರಿಯಿಂದ ಮನೆಬಿಟ್ಟು ಊರಿಗೆ ಹೋಗಲು ತಂಡೋಪತಂಡವಾಗಿ ಯಲಹಂಕದ ಕೋಗಿಲು ಕ್ರಾಸ್ ಬಸ್ ಸ್ಟ್ಯಾಂಡ್ ಗೆ ಬಂದಿರುವುದನ್ನು ಕಂಡ ಪೊಲೀಸರು ಜನತೆಗೆ ವಿಚಾರಿಸಿದಾಗ ಅಮರ್ ನಾಥನ ಸುಳ್ಳು ವದಂತಿಯ ಸತ್ಯ ಬಯಲಿಗೆ ಬಂದಿದೆ.
ಕೊರೋನ ಸೋಂಕಿನ ಬಗ್ಗೆ ಸುಳ್ಳು ವದಂತಿ ಹರಡಿಸಿರುವ ಅಮರ್ ನಾಥ್ ವಿರುದ್ಧ ಕ್ರೈಂ.ನಂ.53/2020, IPC ಕಲಂ 153, 188, 504 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಯಲಹಂಕ ಪೊಲೀಸ್ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ