ನವದೆಹಲಿ, ಮಾ.31(DaijiworldNews/PY) : ಕಿಂಗ್ ಫಿಶರ್ ಏರ್ಲೈನ್ಸ್ ಭಾರತೀಯ ಬ್ಯಾಂಕ್ಗಳಿಂದ ಪಡೆದಿದ್ದ ಶೇ.100ರಷ್ಟು ಸಾಲವನ್ನು ಮರುಪಾವತಿ ಮಾಡಲು ಸಿದ್ಧವಿದ್ದೇನೆಂದು ಮಂಗಳವಾರ ವಿಜಯ್ ಮಲ್ಯ ಅವರು ಹೇಳಿದ್ದಾರೆ.
ಈ ವಿಚಾರವಾಗಿ ಅವರು ಟ್ವೀಟ್ ಮಾಡಿದ್ದು, ಪದೇ ಪದೇ ಹಣವನ್ನು ಪಾವತಿಸಲು ಪ್ರಸ್ತಾಪ ಮಾಡುತ್ತಿದ್ದರೂ, ಬ್ಯಾಂಕ್ಗಳು ಹಣವನ್ನು ತೆಗೆದುಕೊಳ್ಳಲು ಯಾವುದೇ ಆಸಕ್ತಿ ತೋರಿಸುತ್ತಿಲ್ಲ ಎಂದು ತಿಳಿಸಿದ್ದಾರೆ.
ತನ್ನ ಕಂಪನಿಯ ಲಗತ್ತಿಸಲಾದ ಆಸ್ತಿಗಳನ್ನು ಬಿಡುಗಡೆ ಮಾಡಲು ಜಾರಿ ನಿರ್ದೇಶನಾಲಯವು ಯಾವುದೇ ಆಸಕ್ತಿ ತೋರಿಸುತ್ತಿಲ್ಲ. ಕೊರೊನಾ ಎಂಬ ಸಾಂಕ್ರಾಮಿಕ ರೋಗವನ್ನು ದೇಶವು ಎದುರಿಸುತ್ತಿದ್ದು, ಈ ಸಂದರ್ಭದಲ್ಲಿ ನನ್ನ ಮನವಿಯನ್ನು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಆಲಿಸುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ನಾನು ಭಾರತೀಯ ಕಂಪನಿಗಳಿಂದ ಕಿಂಗ್ ಫಿಶರ್ ಏರ್'ಲೈನ್ಸ್ ಪಡೆದಿದ್ದ ಶೇ.100ರಷ್ಟು ಸಾಲವನ್ನು ಮರು ಪಾವತಿ ಮಾಡಲು ಸಿದ್ಧನಿದ್ದೇನೆ. ಆದರೆ, ಹಣವನ್ನು ಮರು ಪಡೆಯಲು ಬ್ಯಾಂಕುಗಳೇ ಆಸಕ್ತಿ ತೋರುತ್ತಿಲ್ಲ. ಬ್ಯಾಂಕ್ಗಳ ಆದೇಶದ ಮೇರೆಗೆ ಈಗಾಗಲೇ ವಶಕ್ಕೆ ಪಡೆದುಕೊಂಡಿರುವ ದಾಖಲೆಗಳನ್ನು ನೀಡಲು ಜಾರಿ ನಿರ್ದೇಶನಾಲಯ ಸಿದ್ದವಿಲ್ಲ. ಇಂತಹ ಬಿಕ್ಕಟ್ಟಿನ ಸಂದರ್ಭ ವಿತ್ತ ಸಚಿವರು ನನ್ನ ಮನವಿಯನ್ನು ಆಲಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ಇದೇ ಸಂದರ್ಭ ದೇಶವ್ಯಾಪ್ತಿ ಘೋಷಣೆ ಮಾಡಿರುವ ಲಾಕ್ಡೌನ್ ಕುರಿತಂತೆ ಮಾತನಾಡಿರುವ ಮಲ್ಯ, ಇದು ಒಂದು ಚಿಂತಿಸಲು ಅಸಾಧ್ಯವಾದ ತೀರ್ಮಾನವಾಗಿದೆ. ನನ್ನ ಎಲ್ಲಾ ಕಂಪೆನಿಗಳ ಕಾರ್ಯಗಳು ಲಾಕ್ಡೌನ್ ಕಾರಣದಿಂದ ಸ್ಥಗಿತಗೊಂಡಿದೆ. ಆದರೆ, ನೌಕರರನ್ನು ಮನೆಗೆ ಕಳುಹಿಸುತ್ತಿಲ್ಲ, ವೇತನವನ್ನು ನೀಡಲಾಗುತ್ತದೆ. ಸರ್ಕಾರದ ನಡೆ ಉತ್ತಮವಾಗಿದೆ. ನನಗೆ ಸರ್ಕಾರ ಸಹಾಯ ಮಾಡಬೇಕಿದೆ ಎಂದಿದ್ದಾರೆ.
ಕೊರೋನಾ ವಿರುದ್ದ ಹೋರಾಡಲು ಸಾಮಾಜಿಕ ಅಂತರವನ್ನು ಪ್ರತಿಯೊಬ್ಬರೂ ಕಾಪಾಡಬೇಕು. ಸುರಕ್ಷಿತವಾಗಿರು ಮತ್ತು ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಮನೆಯಲ್ಲಿಯೇ ಇದ್ದು ಕುಟುಂಬ ಹಾಗೂ ಸಾಕುಪ್ರಾಣಿಗಳೊಂದಿಗೆ ಮನೆಯಲ್ಲಿ ಸಮಯವನ್ನು ಕಳೆಯಬಹುದು. ಅದೇ ರೀತಿಯಾಗಿ ನಾನು ಮಾಡುತ್ತಿದ್ದೇನೆ. ಇದು ಪುಲ್ವಾಮ ಅಥವಾ ಕಾರ್ಗಿಲ್ನಂತೆ ಅಲ್ಲ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.