ಶಿವಮೊಗ್ಗ, ಮಾ 31 (Daijiworld News/MSP): ಕರೋನಾ ವೈರಸ್ ನಿಯಂತ್ರಣ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ನೆರವಾಗಲು ನೋಂದಣಿ ಮಾಡಿಸಿರುವ ಕರೋನಾ ವಾರಿಯರ್ಸ್ ಸ್ವಯಂ ಸೇವಕರು ಜಿಲ್ಲಾಡಳಿತದ ನಿರ್ದೇಶನದ ಪ್ರಕಾರ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲೆಯ ಕರೋನಾ ವಾರಿಯರ್ಸ್ ಪ್ರಥಮ ತಂಡಕ್ಕೆ ಅಗತ್ಯ ಸೂಚನೆಗಳನ್ನು ನೀಡಿ ಮಾತನಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ಬರುವ ವದಂತಿಗಳನ್ನು ಜಿಲ್ಲಾಡಳಿತದ ಗಮನಕ್ಕೆ ತಕ್ಷಣ ತರುವುದು, ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವವರಿಗೆ ಮನೆ ಬಾಗಿಲಿಗೆ ಆಹಾರ, ಅಗತ್ಯವಿರುವವರಿಗೆ ಪಡಿತರ ಪೂರೈಕೆ ಮಾಡುವುದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು, ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಕ್ರಮ ವಹಿಸುವುದು, ಜನರು ಗುಂಪು ಸೇರದಂತೆ ಸೂಚನೆಗಳನ್ನು ನೀಡುವುದು, ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಆಶ್ರಯ ಇತ್ಯಾದಿ ಕಾರ್ಯಗಳನ್ನು ಕೈಗೊಳ್ಳುವುದು ಸೇರಿದಂತೆ ಜಿಲ್ಲಾಡಳಿತ ಸೂಚಿಸುವ ಕಾರ್ಯಗಳನ್ನು ಕರೋನಾ ವಾರಿಯರ್ಸ್ ನಿರ್ವಹಿಸಬೇಕಾಗಿದೆ ಎಂದು ಅವರು ಹೇಳಿದರು.
ಸಾಮಾಜಿಕ ಜಾಲ ತಾಣಗಳಲ್ಲಿ ಕಂಡು ಬರುವ ಯಾವುದೇ ವದಂತಿಗಳು, ಅನಧಿಕೃತ ಸುದ್ದಿಗಳನ್ನು ತಕ್ಷಣ ಜಿಲ್ಲಾ ವಾರ್ತಾಧಿಕಾರಿ ಅವರ ಗಮನಕ್ಕೆ ತರಬೇಕು. ಕರೋನಾ ವಾರಿಯರ್ಸ್ ಸ್ವಯಂ ಸೇವಕರಿಗೆ ಸರ್ಕಾರದ ವತಿಯಿಂದ ಗುರುತಿನ ಪತ್ರ ಒದಗಿಸಲಾಗಿದ್ದು, ಯಾವುದೇ ಕಾರಣಕ್ಕೂ ಅದನ್ನು ದುರುಪಯೋಗ ಪಡಿಸಿಕೊಳ್ಳಬಾರದು. ದುರುಪಯೋಗ ಪಡಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು. ಸ್ವಯಂ ಸೇವಾ ಕಾರ್ಯಗಳಿಗೆ ಮಾತ್ರ ಗುರುತಿನ ಚೀಟಿ ಬಳಕೆ ಮಾಡಬೇಕು ಎಂದು ಅವರು ಸ್ಪಷ್ಟಪಡಿಸಿದರು.
ರೆಡ್ಕ್ರಾಸ್ ಸಂಸ್ಥೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕಾರ್ಮಿಕ ಸೊಸೈಟಿ ಜಂಟಿಯಾಗಿ ಕರೋನಾ ವಾರಿಯರ್ಸ್ಗಳನ್ನು ಆನ್ಲೈನ್ ಮೂಲಕ ನೋಂದಣಿ ಮಾಡಿಸಿ ಈಗಾಗಲೇ ತರಬೇತಿ ನೀಡಿದೆ. ಜಿಲ್ಲೆಯಲ್ಲಿ 200ಕ್ಕೂ ಅಧಿಕ ಮಂದಿ ಸ್ವಯಂ ಸೇವಕರಾಗಿ ನೋಂದಾಯಿಸಿಕೊಂಡಿದ್ದಾರೆ.