ನವದೆಹಲಿ,ಮಾ 31 (Daijiworld News/MSP): ರಾಷ್ಟ್ರ ರಾಜಧಾನಿಯ ನಿಜಾಮುದ್ದೀನ್ ಪ್ರದೇಶದ ಮಾರ್ಕಾಜ್ ಕಟ್ಟಡದಲ್ಲಿ ತಂಗಿದ್ದ ಕನಿಷ್ಟ 24 ಜನರಲ್ಲಿ ಕರೋನವೈರಸ್ ಪಾಸಿಟಿವ್ ಪತ್ತೆಯಾಗಿದೆಯೆಂದು ದೆಹಲಿಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಮಂಗಳವಾರ ಹೇಳಿದ್ದಾರೆ.
" ಈ ಕಟ್ಟಡದಲ್ಲಿ 1500 ರಿಂದ 1700 ಜನರು ನೆರೆದಿದ್ದರು ಎಂದು ಅಂದಾಜಿಸಲಾಗಿದ್ದು, ನಿರ್ಧಿಷ್ಟ ಸಂಖ್ಯೆ ಖಚಿತವಾಗಿಲ್ಲ. ಕಟ್ಟಡದಲ್ಲಿ ನೆರೆದಿದ್ದವರೆನ್ನೆರಲ್ಲರೂ ಪರೀಕ್ಷೆಗೆಗೊಳಪಡಿಸಲಾಗುತ್ತಿದೆ. ಇಲ್ಲಿಯವರೆಗೆ 1033 ಜನರನ್ನು ಸ್ಥಳಾಂತರಿಸಲಾಗಿದೆ. ಅವರಲ್ಲಿ 334 ಜನರನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ ಮತ್ತು 700 ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗಿದೆ. ಅಲ್ಲದೆ ಈವರೆಗೆ ಒಟ್ಟು 24 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ "ಎಂದು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಹೇಳಿದರು.
ಇದೇ ವೇಳೆ ಧಾರ್ಮಿಕ ಕಾರ್ಯಕ್ರಮ ಸಂಘಟಕರ ವಿರುದ್ದ ವಾಗ್ದಾಳಿ ನಡೆಸಿದ ಅವರು, ಸಂಘಟಕರು ಘೋರ ಅಪರಾಧ ಮಾಡಿದ್ದಾರೆ ಎಂದು ಹರಿಹಾಯ್ದರು.
" ಸಂಘಟಕರು ಘೋರ ಅಪರಾಧ ಮಾಡಿದ್ದಾರೆ. ವಿಪತ್ತು ಕಾಯ್ದೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯೂ ಜಾರಿಗೆ ತಂದಿರುವ ಸಂದರ್ಭದಲ್ಲಿ 5 ಕ್ಕೂ ಹೆಚ್ಚು ಜನರ ಸಭೆ ನಡೆಸಲು ಅವಕಾಶವಿಲ್ಲ. ಇಂತಹ ಸಂದರ್ಭದಲ್ಲಿ ಸಂಘಟಕರು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಇವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ರಾಜ್ಯಪಾಲರಿಗೆ ಪತ್ರ ಬರೆದಿದ್ದು, ಸಂಘಟಕರ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.