ನವದೆಹಲಿ, ಮಾ.31(DaijiworldNews/PY) : ದೇಶಾದ್ಯಂತ ಲಾಕ್ಡೌನ್ ಘೋಷಿಸಿದ ಬಳಿಕ ತೀವ್ರ ತೊಂದರೆಗೆ ಒಳಗಾಗಿರುವ ವಲಸೆ ಕಾರ್ಮಿಕರಿಗೆ ಆಹಾರ ಹಾಗೂ ಆಶ್ರಯ ಒದಗಿಸುವ ನಿಟ್ಟಿನಲ್ಲಿ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೈಗೆತ್ತಿಕೊಂಡಿದೆ.
ಅರ್ಜಿ ವಿಚಾರಣೆ ವೇಳೆ ಕೇಂದ್ರದ ಗೃಹ ಕಾರ್ಯದರ್ಶಿ ಅವರು ಮಂಗಳವಾರ ಬೆಳಗ್ಗೆ 11 ಗಂಟೆ ಹೊತ್ತಿಗೆ ರಸ್ತೆ ಮೇಲೆ ಯಾವುದೇ ವಲಸೆ ಕಾರ್ಮಿಕರು ಇರಲಿಲ್ಲ ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಿದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಗೃಹ ಕಾರ್ಯದರ್ಶಿ ಅವರು ಇಂದು ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಯಾರೂ ರಸ್ತೆಯಲ್ಲಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಸಮೀಪದ ಆಶ್ರಯ ತಾಣಕ್ಕೆ ವಲಸೆ ಕಾರ್ಮಿಕರನ್ನು ಬಲವಂತವಾಗಿ ಕರೆದೊಯ್ಯಲಾಗಿದೆ. ಎಂದು ತಿಳಿಸಿದರು.
ಎಲ್ಲಾ ಸಾರ್ವಜನಿಕ ಸಾ ರಿಗೆಯನ್ನು ಕೊರೊನ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆ ಸ್ಥಗಿತಗೊಳಿಸಲಾಯಿತು. ಮಹಾನಗರಗಳಲ್ಲಿರುವ ವಲಸೆ ಕಾರ್ಮಿಕರು ಬಳಿಕ ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲಿಯೇ ತೆರಳಲು ಪ್ರಾರಂಭಿಸಿದರು. ದೀರ್ಘ ಪ್ರಯಾಣದ ಸಂದರ್ಭ ಹಲವಾರು ಹೃದಯ ವಿದ್ರಾವಕ ಘಟನೆಗಳು ನಡೆದವು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಅವರು ತಜ್ಞರ ಸಮಿತಿಯನ್ನು 24 ಗಂಟೆಗಳ ಒಳಗೆ ರಚಿಸುವಂತೆ ಸರ್ಕಾರಕ್ಕೆ ಆದೇಶ ನೀಡಿದ್ದಾರೆ.