ಬೆಂಗಳೂರು, ಮಾ.31(DaijiworldNews/PY) : ರಾಜ್ಯ ಸರ್ಕಾರ ಕೊರೊನಾ ವ್ಯಾಪಿಸುವುದನ್ನು ನಿಯಂತ್ರಿಸಲು ವಿಧಿಸಿರುವ ನಿಯಮಗಳು ಸರಿಯಾಗಿ ಪಾಲನೆ ಆಗುತ್ತಿರುವುದರ ಮೇಲೆ ನಿಗಾವಹಿಸುವುದಕ್ಕೆ ಆಸಕ್ತಿಕರ ಮಾರ್ಗವೊಂದನ್ನು ಕಂಡುಹಿಡಿದಿದೆ.
ಹೋಂಕ್ವಾರಂಟೈನ್ನಲ್ಲಿ ಇರುವವರು ಗಂಟೆಗೊಂದು ಸೆಲ್ಫಿ ತೆಗೆದು ಆರೋಗ್ಯ ಇಲಾಖೆಗೆ ಕಳುಹಿಸುವುದು ಕಡ್ಡಾಯವಾಗಿದೆ ಎಂದು ಸರ್ಕಾರ ತಿಳಿಸಿದೆ.
ಸರ್ಕಾರದ ಆದೇಶದ ಪ್ರಕಾರ, ಜಿಪಿಎಸ್ ನಿರ್ದೇಶಾಂಕಗಳನ್ನು ಸೆಲ್ಫಿಗಳು ಒಳಗೊಂಡಿವೆ. ಇದು ವ್ಯಕ್ತಿಯೊಬ್ಬ ಇರುವ ಸ್ಥಳ ಹಾಗೂ ಚಲನವನಗಳ ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ.
ಈ ಸೆಲ್ಫಿ ನಿಯಮವನ್ನು ಪಾಲನೆ ಮಾಡದವರನ್ನು ಹೋಂಕ್ವಾರಂಟೈನ್ನಿಂದ ಮಾಸ್ ಕ್ವಾರಂಟೈನ್ನಲ್ಲಿ ಇಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಒಂದು ವೇಳೆ ಹಲವು ಸೆಲ್ಫಿಗಳನ್ನು ತೆಗೆದು ಬೇರೆ ಬೇರೆ ಸಮಯಕ್ಕೆ ಕಳುಹಿಸಿದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರು, ಫೋಟೋಗಳ ಮೇಲೆ ಸಮಯವಿರುತ್ತದೆ. ಹಾಗಾಗಿ ಪ್ರತಿ ಗಂಟೆಗೆ ಒಮ್ಮೆ ಅವರು ಫೋಟೋ ಕಳುಹಿಸಲೇಬೇಕು ಎಂದು ತಿಳಿಸಿದರು.
ಕೆಲವರಿಗೆ ಮಧ್ಯಾಹ್ನದ ಸಂದರ್ಭ ಕಿರು ನಿದ್ರೆ ಮಾಡುವ ಅಭ್ಯಾಸ ಇರುತ್ತದೆ. ಅಂತವರಿಗೆ ಈ ನಿಯಮದಿಂದ ತೊಂದರೆ ಆಗುವುದಿಲ್ಲವೇ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಅವರನ್ನು ಕೇಳಿದಾಗ, ಎರಡು ಗಂಟೆ ಮಧ್ಯಾಹ್ನದ ಊಟ ಹಾಗೂ ಕಿರು ನಿದ್ರೆಗೆ ತೆಗೆದುಕೊಳ್ಳಬಹುದು. ನಾವು ಇಂದು ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡಲೇಬೇಕಾದ ಪರಿಸ್ಥಿತಿಯಲ್ಲಿ ಇದೆ. ಎಲ್ಲರೂ ಇದನ್ನು ಗಂಭೀರವಾಗಿ ಪರಿಗಣಿಸಲೇಬೇಕು ಎಂದು ಹೇಳಿದರು.