ಬಿಹಾರ, ಮಾ.31(DaijiworldNews/PY) : ಕೊರೊನಾ ತಪಾಸಣೆ ಇಲ್ಲದೇ ಮಹಾರಾಷ್ಟ್ರದಿಂದ ಬಂದಿದ್ದ ಇಬ್ಬರು ವಲಸಿಗರ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದ ವ್ಯಕ್ತಿಯನ್ನು ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬಿಹಾರದ ಸೀತಾಮಾರ್ಹಿ ಜಿಲ್ಲೆಯಲ್ಲಿ ನಡೆದಿದೆ.
ಪೊಲೀಸರು ಘಟನೆ ಸಂಬಂಧ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಈ ಘಟನೆ ಸೋಮವಾರ ಸಂಜೆ ನಡೆದಿದ್ದು, ಜಿಲ್ಲೆಯ ಮಧೌಲ್ ಗ್ರಾಮದ ನಿವಾಸಿ ಬಬೂಲ್ ಕುಮಾರ್ ಎಂಬುವವರು ಹೆಲ್ಪ್ಲೈನ್ ನಂಬರ್ಗೆ ಕರೆ ಮಾಡಿ ಮಹಾರಾಷ್ಟದಿಂದ ನಮ್ಮ ಊರಿಗೆ ಕೊರೊನಾ ತಪಾಸಣೆ ಇಲ್ಲದೇ ಬಂದಿದ್ದ ಮುನ್ನಾ ಮಹತೋ, ಸುಧೀರ್ ಕುಮಾರ್
ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವಿಚಾರ ತಿಳಿದು ತಕ್ಷಣವೇ ಆಗಮಿಸಿದ ವೈದ್ಯರ ತಂಡ ತಪಾಸಣೆ ನಡೆಸಿದ್ದು, ಆದರೆ, ಅವರಿಗೆ ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಪತ್ತೆಯಾಗಲಿಲ್ಲ.
ವೈದ್ಯಾಧಿಕಾರಿಗಳ ತಂಡ ತೆರಳುತ್ತಿದ್ದಂತೆಯೇ ಬಾಬೂಲ್ ಕುಮಾರ್ ಮೇಲೆ ಮುನ್ನಾ ಮಹತೋ, ಸುಧೀರ್ ಕುಮಾರ್ ಅವರ ಕುಟುಂಬದವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಬಾಬೂಲ್ ಕುಮಾರ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಅವರು ಮೃತಪಟ್ಟಿದ್ದಾರೆ.
ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದ ವಿಚಾರದಲ್ಲಿ ದ್ವೇಷ ಉಂಟಾಗಿತ್ತು. ಭಾನುವಾರ ಬಬ್ಲು ಕುಮಾರ್ ಒಬ್ಬನೆ ಇರುವುದನ್ನು ನೋಡಿದ ಆರೋಪಿಗಳು ಆತನ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ.
ಮೃತ ವ್ಯಕ್ತಿಯ ತಂದೆ ವಿನೋದ್ ಸಿಂಗ್ ಎಂಬುವವರು ನೀಡಿರುವ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.