ನವದೆಹಲಿ, ಮಾ.31(DaijiworldNews/PY) : ರಾಷ್ಟ್ರದಾದ್ಯಂತ ಲಾಕ್ಡೌನ್ ಘೋಷಿಸಿರುವ ಹಿನ್ನೆಲೆ ಮನೆಯೊಳಗೆ ನಾವೆಲ್ಲರೂ ಬಂಧಿಗಳಾಗಿ, ಸುರಕ್ಷಿತವಾಗಿದ್ದರೆ, ತಮ್ಮ ಹಾಗೂ ತಮ್ಮ ಕುಟುಬದವರ ಸುರಕ್ಷತೆಯತ್ತ ಗಮನಹರಿಸದೇ ನಿರಂತರವಾಗಿ ವೈದ್ಯರು ಕೊರೊನಾ ಪೀಡಿತರ ಸೇವೆಯಲ್ಲಿ ತೊಡಗಿದ್ದಾರೆ. ತಮ್ಮ ಕುಟುಂಬದವರನ್ನು ಬಿಡುವಾದಾಗೆಲ್ಲಾ ನೋಡೋಣ ಎಂದೆನಿಸಿದರೂ ಕೊರೊನಾ ವೈರಸ್ ಸೋಂಕಿನ ಭೀತಿ ಮಾತ್ರ ಅವರನ್ನು ಬಿಟ್ಟುಬಿಡದಂತೆ ಕಾಡುತ್ತಿದೆ. ಹಾಗಾಗಿ ಹಲವಾರು ವೈದ್ಯರು ಮನೆಗೆ ತೆರಳದೇ, ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ವಿಶ್ರಾಂತಿ ಪಡೆದು ಕರ್ತವ್ಯಕ್ಕೆ ಮರಳುತ್ತಿದ್ದಾರೆ.
ಕೊರೊನಾ ವಾರಿಯರ್ ಆಗಿ ದೆಹಲಿ ಆಸ್ಪತ್ರೆಯೊಂದರಲ್ಲಿ ಕೊರೊನಾ ಪೀಡಿತರ ಸೇವೆಯಲ್ಲಿ ತೊಡಗಿದ್ದ ವೈದ್ಯರೊಬ್ಬರು ಕುಟುಂಬಸ್ಥರನ್ನು ಭೇಟಿಯಾಗಬೇಕೆಂದೆನಿಸಿ, ಪತ್ನಿ, ಮಕ್ಕಳನ್ನು ನೋಡಿ ಆರಾಮವಾಗಿ ಕುಳಿತು ಚಹಾ ಕುಡಿಯಬೇಕು ಎಂಬ ಬಯಕೆಯಲ್ಲಿದ್ದರು.
ಅವರು ತಡಮಾಡದೇ ಮಂಗಳವಾರ ಆಸ್ಪತ್ರೆಯಿಂದ ಮನೆಗೆ ತೆರಳಿದ್ದು, ಮನೆಯ ಗೇಟ್ ಸಮೀಪ ಹೋಗುತ್ತಲೇ ಅವರಿಗೆ ಕೊರೊನಾ ವೈರಸ್ ಭೀತಿ ಆವರಿಸಿತ್ತು. ಕೂಡಲೇ ಅವರು ಗೇಟ್ನಿಂದ ಅನತಿ ದೂರದಲ್ಲಿ ಕುಳಿತು, ಪತ್ನಿಗೆ ಹೇಳಿ ಚಹಾ ಮಾಡಿಸಿಕೊಂಡು ಕುಡಿದು. ದೂರದಿಂದಲೇ ಮಕ್ಕಳೊಂದಿಗೆ ಮಾತನಾಡಿ, ಪುನಃ ತಮ್ಮ ಕರ್ತವ್ಯಕ್ಕೆ ವಾಪಾಸ್ಸಾದರು.