ನವದೆಹಲಿ, ಎ.01 (DaijiworldNews/PY) : ನಿಜಾಮುದ್ದೀನ್ ಮರ್ಕಾಜ್ ಮಸೀದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸುಮಾರು 2000 ತಬ್ಲೀಕ್ ಇ ಜಮಾತ್ ಕಾರ್ಯಕರ್ತರನ್ನು ಹುಡುಕಿ ಈ ಕೂಡಲೇ ಕ್ವಾರಂಟೈನ್ ಮಾಡಿ, ವಿದೇಶಿಗರನ್ನು ಗಡಿಪಾರು ಮಾಡಿ ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
ದೆಹಲಿ ನಿಜಾಮುದ್ದೀನ್ ಪ್ರದೇಶದಲ್ಲಿರುವ ಮರ್ಕಜ್ ಮಸೀದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರ ಪೈಕಿ ತೆಲಂಗಾಣ ಮೂಲದ 6 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟ ಬೆನ್ನಲ್ಲೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇತರರಿಗೂ ಸೋಂಕು ಹರಡಿರುವ ವಿಚಾರವಾಗಿ ಶಂಕೆ ವ್ಯಕ್ತವಾಗಿದೆ. ಕೇಂದ್ರ ಸರ್ಕಾರ ಇದೇ ಕಾರಣಕ್ಕೆ ಕೇಂದ್ರಾಡಳಿತ ಪ್ರದೇಶಗಳಿಗೆ ಹಾಗೂ ರಾಜ್ಯ ಸರ್ಕಾರಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಈ ಕೂಡಲೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸುಮಾರು 2000 ವಿದೇಶಿಗರನ್ನೂ ಹುಡುಕಿ ಗಡಿಪಾರು ಮಾಡುವಂತೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ. ಈ ವಿಚಾರವಾಗಿ ಕೇಂದ್ರ ಗೃಹಸಚಿವಾಲಯ ಎಲ್ಲಾ ರಾಜ್ಯ ಸರ್ಕಾರಗಳ ಕಾರ್ಯದರ್ಶಿಗಳಿಗೆ ಪತ್ರ ರವಾನಿಸಿದ್ದು, ವಿದೇಶಿ ಜಮಾತ್ ಕಾರ್ಯಕರ್ತರ ಕೊರೊನಾ ವೈರಸ್ ಪರೀಕ್ಷೆ ನೆಗೆಟಿವ್ ಇದ್ದರೂ ಅವರನ್ನು ದೇಶದಿಂದ ಗಡಿಪಾರು ಮಾಡಿ. ಅವರನ್ನು ಲಭ್ಯವಿರುವ ಯಾವುದೇ ವಿಮಾನದಲ್ಲಿ ಸ್ವದೇಶಕ್ಕೆ ಕಳುಹಿಸಿ ಎಂದು ತಿಳಿಸಿದೆ.
ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಹಲವರಿಗೆ ಕೊರೊನಾ ಸೋಂಕು ಲಕ್ಷಣಗಳು ಕಾಣಿಸಿಕೊಂಡಿದ್ದು, ಎಲ್ಲರನ್ನೂ ತೀವ್ರ ನಿಗಾದಲ್ಲಿ ಇರಿಸಲಾಗಿದೆ. ಇದೇ ವಿಚಾರವಾಗಿ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದ್ದು, ಈ ಹೊತ್ತಲ್ಲಿ ನಾವು ತಪ್ಪು ಹುಡುಕುವ ಬದಲು ರೋಗ ಹರಡಿರುವ ಜಾಗಗಳ ಬಗ್ಗೆ ಪತ್ತೆ ಹಚ್ಚಿ ಅದು ಮತ್ತಷ್ಟು ಹರಡದಂತೆ ನೋಡಿಕೊಳ್ಳಬೇಕು ಎಂದು ಹೇಳಿದೆ. ಇನ್ನು ಈ ಧಾರ್ಮಿಕ ಸಭೆಯಲ್ಲಿ ಭಾಗಿಯಾದ 24 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸಭೆಯಲ್ಲಿ ಭಾಗವಹಿಸಿದ 700 ಮಂದಿಯನ್ನು ಕ್ವಾರಂಟೈನ್ನಲ್ಲಿರಿಸಲಾಗಿದೆ. ಈ ಪೈಕಿ 335 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ. ನಿನ್ನೆಯಷ್ಟೇ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ನಿಜಾಮುದ್ದೀನ್ ಮಸೀದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಗಮಿಸಿದ್ದ 6 ಮಂದಿ ಕೊರೋನಾ ವೈರಸ್ ಲಕ್ಷಣದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾರತೀಯರು ಮಾತ್ರವಲ್ಲದೇ ಸುಮಾರು 70 ದೇಶಗಳಿಂದ 2000ಕ್ಕೂ ಅಧಿಕ ವಿದೇಶಿಗರು ಭಾಗವಹಿಸಿದ್ದರು. . ಈ ಪೈಕಿ ಬಾಂಗ್ಲಾದೇಶದಿಂದ 493 ಮಂದಿ, ಇಂಡೋನೇಷ್ಯಾದಿಂದ 472 ಮಂದಿ, ಮಲೇಷ್ಯಾದಿಂದ 150 ಮಂದಿ, ಥೈಯ್ಲಾಂಡ್ ನಿಂದ 142 ಮಂದಿ ಸೇರಿದಂತೆ 70 ರಾಷ್ಟ್ರಗಳಿಂದ ಸುಮಾರು 2000ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ. ಈ ಕಾರ್ಯಕ್ರಮಕ್ಕಾಗಿ ಇವರೆಲ್ಲರೂ ಕಳೆದ ಆರು ತಿಂಗಳಿನಿಂದಲೇ ಭಾರತಕ್ಕೆ ಬಂದಿದ್ದರು. ಅಲ್ಲದೇ, 6 ತಿಂಗಳ ಹಿಂದೆಯೇ ಭಾರತದ ವೀಸಾ ಕೂಡ ಪಡೆದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತಮಿಳುನಾಡಿನ ಈರೋಡ್ ನಲ್ಲಿಸ ಮರ್ಕಜ್ ನಲ್ಲಿ ಪಾಲ್ಗೊಂಡಿದ್ದಜ 8 ಮಂದಿ ಇಂಡೋನೇಷ್ಯಾ ಪ್ರಜೆಗಳು ತಂಗಿದ್ದರು.
ನಿಜಾಮುದ್ದೀನ್ ಮಸೀದಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಪೈಕಿ ಹಲವರಿಗೆ ಕೊರೊನಾ ಸೋಂಕಿನ ಲಕ್ಷಣಗಳು ಕಾಣುತ್ತಿವೆ ಎಂದು ದೂರಿದ್ದು, ಭಾರತದಲ್ಲಿ ಇದೇ ಕಾರಣಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುವ ಆತಂಕ ಶುರುವಾಗಿದೆ. ಹಾಗಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬ ವಿದೇಶಿಗನನ್ನೂ ಹುಡುಕಿ ಅವರನ್ನು ಸ್ಕ್ರೀನಿಂಗ್ ಮಾಡಿ ಅಗತ್ಯ ಬಿದ್ದರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವಂತೆ ತಿಳಿಸಿದೆ. ಸಾಧ್ಯವಾದಷ್ಟೂ ಬೇಗ ಅವರನ್ನು ಅವರವರ ದೇಶಕ್ಕೆ ವಾಪಸ್ ಕಳುಹಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಇದಕ್ಕಾಗಿ ಲಭ್ಯವಿರುವ ಅವರನ್ನು ಯಾವುದೇ ವಿಮಾನಗಳಲ್ಲಿ ದೇಶದಿಂದ ರವಾನಿಸುವಂತೆ ಸೂಚಿಸಿದೆ. ಈ ಸಂಬಂಧ ದೇಶದ ಮೂಲೆ ಮೂಲೆಯಲ್ಲಿರುವ ಎಲ್ಲ ರಾಯಭಾರ ಕಚೇರಿಗಳಿಗೂ ಕೇಂದ್ರ ಸರ್ಕಾರ ಘೋಷಿಸಿದೆ.