ಶ್ರೀನಗರ, ಎ.01 (DaijiworldNews/PY) : ಕೊರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ದೇಶಾದ್ಯಂತ ಲಾಕ್ಡೌನ್ ಮಾಡಲಾಗಿದ್ದು, ಈ ನಡುವೆ ಆಸ್ಪತ್ರೆ ಸೇರಿದ್ದ ವ್ಯಕ್ತಿಯೊಬ್ಬ ಮನೆಗೆ ವಾಪಾಸ್ಸಾಗಲು ಸತ್ತಂತೆ ನಾಟಕ ಮಾಡಿ, ಸುಳ್ಳು ದಾಖಲೆ ಮಾಡಿಸಿ ಪೊಲೀಸರನ್ನು ಸಂಕಷ್ಟಕ್ಕೊಳಪಡಿಸಿದ್ದಾನೆ.
ಆಸ್ಪತ್ರೆಗೆ ಸೇರಿದ್ದ ವ್ಯಕ್ತಿಯೋರ್ವ ಮನೆ ಸೇರುವ ಸಲುವಾಗಿ ಸತ್ತಂತೆ ನಟಿಸಿ ಆಂಬುಲೆನ್ಸ್ ಮುಖಾಂತರ ಮನೆಗೆ ತಲುಪಿದ ವಿಚಿತ್ರ ಘಟನೆ ಪೂಂಚ್ ಜಿಲ್ಲೆಯಲ್ಲಿ ನಡೆದಿದೆ.
ಕಳೆದ ವಾರ ಹಕ್ರಮ್ ಎಂಬಾತ ಗಾಯಗೊಂಡು ಸರ್ಕಾರಿ ವೈದ್ಯಕೀಯ ಆಸ್ಪತ್ರೆಗೆ ದಾಖಲಾಗಿದ್ದ. ಈತ ಮಂಗಳವಾರ ಬಿಡುಗಡೆಯಾಗಿದ್ದು, ದೇಶಾದ್ಯಂತ ಲಾಖ್ಡೌನ್ ಇದ್ದ ಹಿನ್ನೆಲೆ ಆತನಿಗೆ ಮನೆಗೆ ತೆರಳಲು ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ತನ್ನ ಆಪ್ತರ ನೆರವು ಪಡೆದುಕೊಂಡು ಮನಗೆ ತೆರಳಲು ಸುಳ್ಳು ಪ್ರಮಾಣ ಪತ್ರ ಮಾಡಿಸಿಕೊಂಡು ಖಾಸಗಿ ಆಂಬುಲೆನ್ಸ್ ಮುಖಾಂತರ ಮನೆಗೆ ತಲುಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿಷಯ ಗೊತ್ತಾಗುತ್ತಿದ್ದಂತೆ ಕಾರ್ಯಾಚರಣೆಗಿಳಿದ ಪೊಲೀಸರು ಆಯಂಬುಲೆನ್ಸ್ ಚಾಲಕನನ್ನು ವಿಚಾರಣೆಗೊಳಪಡಿಸಿ ನಾಲ್ವರನ್ನು ಬಂಧಿಸಿದ್ದಾರೆ ಹಾಗೂ ಅವರನ್ನು ಹೋಮ್ ಕ್ವಾರಂಟೈನ್ನಲ್ಲಿರಿಸಿದ್ದಾರೆ.