ಅಮೃತ್ಸರ್, ಎ.01 (DaijiworldNews/PY) : ಪಂಜಾಬ್ ರಾಜ್ಯದ ಪಟಿಯಾಲ ಜಿಲ್ಲೆಯ ನಾಭ ಎಂಬಲ್ಲಿ ಮಹಾನಗರ ಪಾಲಿಕೆ ಕಾರ್ಮಿಕರು ಮಂಗಳವಾರ ಮನೆ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸಲು ಆಗಮಿಸಿದ್ದ ಸಂದರ್ಭ ಸ್ಥಳೀಯ ಜನರು ಅವರಿಗೆ ಮನೆಯ ಮಹಡಿಗಳ ಮೇಲಿಂದ ಹೂವಿನ ದಳಗಳನ್ನು ಎಸೆದು ಧನ್ಯವಾದ ಸೂಚಿಸಿದ್ದು, ಇನ್ನೂ ಕೆಲವರು ಅವರಿಗೆ ನೋಟಿನ ಹಾರಗಳನ್ನು ಹಾಕಿ ಗೌರವ ಸಲ್ಲಿಸಿದರು.
ಕೊರೊನಾ ಸೋಂಕಿನ ಭೀತಿ ಇರುವ ಈ ಸಮಯದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಕರ್ತವ್ಯವನ್ನು ನಿಭಾಯಿಸುತ್ತಿರುವ ಕಾರ್ಮಿಕರಿಗೆ ಸ್ಥಳೀಯರು ಮೆಚ್ಚುಗೆ ಸೂಚಿಸಲು ಈ ರೀತಿಯಾದ ಕ್ರಮಕೈಗೊಂಡಿದ್ದರು.
ಮಾಸ್ಕ್ ಧರಿಸಿದ್ದ ಸ್ಥಳೀಯ ನಿವಾಸಿಗಳು ಕಾರ್ಮಿಕರಿಗೆ ನೋಟಿನ ಹಾರ ಹಾಗೂ ಹೂವಿನ ದಳಗಳಿಂದ ಗೌರವ ಸಲ್ಲಿಸುತ್ತಿರುವ ವಿಡಿಯೋವೊಂದನ್ನುಸುದ್ದಿ ಸಂಸ್ಥೆಯೊಂದು ಟ್ವೀಟ್ ಮಾಡಿದೆ.