ಬೆಂಗಳೂರು, ಎ.01 (DaijiworldNews/PY) : "ತಮ್ಮ ಬೆಳೆಗಳನ್ನು ರೈತರು ರಸ್ತೆಗೆ ಚೆಲ್ಲುವುದಾಗಲಿ, ನಾಶ ಮಾಡುವುದಾಗಲಿ ಮಾಡಬಾರದು. ರೈತರು ಯಾರೂ ಆಂತಕಕ್ಕೊಳಪಡದೇ ಸ್ವಲ್ಪ ತಾಳ್ಮೆ ವಹಿಸಿ ಇಲಾಖೆ ನೀಡಿದ ಕ್ರಮಗಳನ್ನು ಅನುಸರಿಸಿ" ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
"ರಾಯಚೂರು ಸೇರಿದಂತೆ ಇನ್ನು ಯಾವುದೇ ಭಾಗದಲ್ಲಿ ರೈತರ ಬೆಳೆ ಸಮೀಕ್ಷೇ ಆಗದೇ ಇದ್ದದ್ದು ಕಂಡುಬಂದಲ್ಲಿ ಕೂಡಲೇ ಸಮೀಕ್ಷೆ ಕೈಗೊಳ್ಳಬೇಕು" ಎಂದು ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿದ ಅವರು, "ಫಸಲು ಸಮೀಕ್ಷೆ ನಡೆಸಿ ಫಸಲ್ ಭೀಮಾಗೆ ಒಳಪಡಿಸಬೇಕು" ಎಂದು ತಿಳಿಸಿದ್ದಾರೆ.
"ರಾಯಚೂರು, ಕೊಪ್ಪಳ, ಮೈಸೂರಿನ ಕೆಲ ಭಾಗ ಸೇರಿದಂತೆ ಹಲವೆಡೆ ಭತ್ತ ಕಟಾವು ಯಂತ್ರೋಪಕರಣಕ್ಕೆ ಗಡಿಯಲ್ಲಿ ನಿಲ್ಲಿಸಬಾರದು. ರೈತರಿಗೆ ಅವಶ್ಯಕವಾದ ಬೀಜ, ಗೊಬ್ಬರ, ಔಷಧಿ ಮಾರಾಟಕ್ಕೆ ಮುಕ್ತ ಅವಕಾಶ ಕಲ್ಪಿಸಿಕೊಡಬೇಕು. ಪೈಪ್ ಅಂಗಡಿ ತೆರೆಯಲು ಹಾಗೂ ಮಾರಾಟ ಮಾಡಲು ಯಾವುದೇ ಅಡೆತಡೆಯಿಲ್ಲ. ಅಗತ್ಯವಾದ ಕ್ರಮಗಳನ್ನು ಮುಂಗಾರು ಬಿತ್ತನೆಗೆ ಕೈಗೊಳ್ಳಲಾಗಿದೆ. ಎಲ್ಲಾ ದಿನಸಿ ತರಕಾರಿ ಅಂಗಡಿ ತೆರೆದಿವೆ. ರೈತರ ಜೀವ ಕುಟುಂಬದ ಹೊಣೆ ಅವರ ಮೇಲೆ ಇರುವ ಕಾರಣ ರೈತರು ಮುಗಿಬೀಳದೆ ಆರೋಗ್ಯದ ಮೇಲೆ ಕಾಳಜಿ ಹೊಂದಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲೇಬೇಕು" ಎಂದರು.
"ಸಾಗಾಣಿಕೆ ರೈಲ್ವೆ ಗೂಡ್ಸ್ ಮೂಲಕ ಮಾಡಬಹುದು. ಹಣ್ಣುಗಳನ್ನು ತಿನ್ನುವುದರಿಂದ ಖಾಯಿಲೆ ಬರುವುದಿಲ್ಲ. ಕಲ್ಲಂಗಡಿ ಹಣ್ಣಾಗಲೀ ಅನಾನಸ್ ಆಗಲಿ ತಿಂದರೆ ಕೊರೊನಾ ಬರುವುದಿಲ್ಲತಪ್ಪು ಮಾಹಿತಿ ಅಪಪ್ರಚಾರಕ್ಕೆ ಬೆಲೆಕೊಡಬಾರದು. ನಿಂಬೆಹಣ್ಣು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿದೆ. ಕಲ್ಲಂಗಡಿ ಅನಾನಸ್ ನಿಂಬೆಹಣ್ದು ಉಪಯೋಗಿಸುವುದು ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ಜನರು ಹೆಚ್ಚು ಹಣ್ಣು ಉಪಯೋಗಿಸಿ" ಎಂದು ತಿಳಿಸಿದರು.
"ರೈತರು ಆತುರಕ್ಕೆ ಒಳಪಟ್ಟಾಗಲಿ ಅಥವಾ ಅಪಪ್ರಚಾರಕ್ಕಾಗಲಿ ಕಿವಿಕೊಡಬಾರದು. ಯಾರೂ ಆತುರಕ್ಕೆ ಬುದ್ಧಿಕೊಟ್ಟು ಬೆಳೆಗಳನ್ನು ನಾಶ ಮಾಡುವುದಾಗಲಿ ರಸ್ತೆಗೆ ಸುರಿಯುವುದಾಗಲೀ ಮಾಡಬಾರದು. ಶಿಥಲೀಕರಣ ಘಟಕ ಎಪಿಎಂಸಿ ವ್ಯವಸ್ಥೆ ಬಳಸಿಕೊಳ್ಳಬೇಕು" ಎಂದು ಹೇಳಿದರು.
"ಪೊಲೀಸರಾಗಲೀ ಬೇರೆ ಯಾರೇ ಆಗಲೀ ಗ್ರೀನ್ ಪಾಸ್ ಹೊಂದಿದ ರೈತರ ಪರಿಕರ ಫಸಲು ಮಾರಾಟ ಸಾಗಾಣಿಕೆಗೆ ತಡೆ ಮಾಡುವಂತಿಲ್ಲ" ಎಂದು ತಿಳಿಸಿದರು.
"ಪಾಸ್ ಹೊಂದಿದ ಬಾಡಿಗೆ ವಾಹನಗಳನ್ನು ಸಹ ರೈತರು ಸಾಗಾಣಿಕೆಗೆ ಬಳಸಬಹುದು. ಅವಕಾಶವನ್ನು ದುರಪಯೋಗ ಮಾಡಿಕೊಳ್ಳುವ ಕೆಲ ಶಕ್ತಿಗಳಿವೆ. ದುರುದ್ದೇಶಪೂರಕ ಕೊರೊನಾ ಪರಿಸ್ಥಿತಿ ಬಳಸಿಕೊಂಡು ದುಪ್ಪಟ್ಟು ಬೆಲೆಗೆ ವಸ್ತುಗಳನ್ನು ಯಾರಾದರೂ ಮಾರಾಟ ಮಾಡಿದ್ದು ಕಂಡುಬಂದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು" ಎಂದು ಹೇಳಿದರು.