ಬೆಂಗಳೂರು, ಏ 01 (DaijiworldNews/SM): ಕೊರೊನಾ ಪಾಸಿಟಿವ್ ಸೋಂಕಿತರಿಗೆ ಔಷಧಿ ನೀಡಿ ಗುಣಪಡಿಸಬಹುದು. ಕೊರೊನಾ ಸೋಂಕಿತರಿಗೆ ಅಗತ್ಯವಾಗುವ ಔಷಧಿಯೊಂದರ ಸಂಶೋಧನೆಯಲ್ಲಿ ನಾವು ತೊಡಗಿಸಿಕೊಂಡಿದ್ದೇವೆ ಎಂಬುವುದಾಗಿ ಮಂಗಳೂರು ಮೂಲದ ಹೆಚ್.ಸಿ.ಜಿ. ಆಸ್ಪತ್ರೆಯ ವೈದ್ಯ ಡಾ. ವಿಶಾಲ್ ತಿಳಿಸಿದ್ದಾರೆ.
ಈ ಬಗ್ಗೆ ಈಗಾಗಲೇ ದಾಯ್ಜಿವರ್ಲ್ಡ್ ಸುದ್ದಿ ಬಿತ್ತರಿಸಿತ್ತು. ಅದರ ಬೆನ್ನಲ್ಲೇ ಇದೀಗ ಎ ಎನ್ ಐ ಗೆ ಪ್ರತಿಕ್ರಿಯೆ ನೀಡಿರುವ ಅವರು, ಸರಳವಾದ ರೀತಿಯಲ್ಲಿ ಚರ್ಮದ ಮೂಲಕ ಅಥವಾ ಲಸಿಕೆಯಂತಹ ರೂಪದಲ್ಲಿ ಸೋಂಕಿತರಿಗೆ ಔಷಧಿಯನ್ನು ಕೊಟ್ಟು ಅವರ ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಧಾನದ ಬಗ್ಗೆ ನಮ್ಮ ಸಂಶೋಧನೆ ನಡೆಯುತ್ತಿದೆ ಎಂದಿದ್ದಾರೆ.
ಔಷಧಿ ಕಂಡುಹುಡುಕುವ ಮೊದಲ ಹಂತದಲ್ಲಿ ನಾವಿದ್ದೇವೆ. ಇನ್ನು ಕೆಲ ವಾರಗಳೊಳಗೆ ಈ ಸಂಶೋಧನೆ ಪೂರ್ತಿಯಾಗಲಿದೆ. ಈ ಬಗ್ಗೆ ನಾವು ಸರಕಾರಕ್ಕೆ ತಿಳಿಸಿದ್ದೇವೆ ಹಾಗೂ ಅವರ ಅಭಿಪ್ರಾಯ ಕೇಳಿದ್ದೇವೆ ಎಂದರು. ಇನ್ನು ರಾಜ್ಯ ಸರಕಾರಕ್ಕೆ ಸಹ ನಾವು ಸಂಶೋಧನೆಯ ಬಗ್ಗೆ ಅಭಿಪ್ರಾಯ ಹೇಳುವಂತೆ ಕೋರಿದ್ದೇವೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.