ತಿರುವನಂತಪುರ, ಏ 2 (Daijiworld News/MSP): ಕೊರೋನಾ ವೈರಸ್ ಹರಡುವುಕೆ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮುಚ್ಚಲಾಗಿರುವ ಮಂಗಳೂರು-ಕಾಸರಗೋಡು ಗಡಿ ರಾಷ್ಟ್ರೀಯ ಹೆದ್ದಾರಿ ರಸ್ತೆಗಳನ್ನು ತುರ್ತು ವೈದ್ಯಕೀಯ ಸೇವೆಗಳಿಗಾಗಿ ತಕ್ಷಣ ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಕೇರಳ ಹೈಕೋರ್ಟ್ ಅಸೋಸಿಯೇಷನ್ ನವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿ ನ್ಯಾಯಪೀಠ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ಮಧ್ಯಂತರ ಆದೇಶ ಪ್ರಕಟಿಸಿತು.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಕೆ.ಜಯಶಂಕರ್ ನಂಬಿಯಾರ್ ಹಾಗೂ ಶಾಜಿ ಪಿ ಚಲಿ ಅವರಿದ್ದ ನ್ಯಾಯಪೀಠವು, 'ಮಂಗಳೂರು ಮತ್ತು ಕೇರಳದ ಕಾಸರಗೋಡು ನಡುವೆ ಸಂಪರ್ಕಿಸುವ ರಸ್ತೆಯು ರಾಷ್ಟ್ರೀಯ ಹೆದ್ದಾರಿಗಳ ಭಾಗವಾಗಿದೆ. ಆದ್ದರಿಂದ ಈ ರಸ್ತೆಗಳನ್ನು ದಿಗ್ಬಂಧನದಿಂದ ಮುಕ್ತವಾಗಿರಿಸುವಂತೆ ನೋಡಿಕೊಳ್ಳುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ. ಯಾವುದೇ ವಿಳಂಬವಿಲ್ಲದೆ ಎರಡು ರಾಜ್ಯಗಳ ನಡುವಿನ ಗಡಿಯುದ್ದಕ್ಕೂ, ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ರೋಗಿಗಳನ್ನು ಕರೆದೊಯ್ಯುವ ವಾಹನಗಳಿಗೆ ಮುಕ್ತ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ನ್ಯಾಯಪೀಠ ಸೂಚಿಸಿತು.
ಕರ್ನಾಟಕ ರಾಜ್ಯದ ಪರವಾಗಿ ಅಡ್ವೋಕೆಟ್ ಜನರಲ್ ಪ್ರಭುಲಿಂಗ ಕೆ ನಾವದಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಾದ ಮಂಡಿಸಿ, ಕಾಸರಗೋಡಿನಲ್ಲಿ ಇಲ್ಲಿಯವರೆಗೆ 106 ಕೊರೊನಾ ಪ್ರಕರನ ಪತ್ತೆಯಾಗಿದೆ. ಮಂಗಳೂರಿನಿಂದ ಕೇವಲ 9 ಕಿ.ಮೀ ಪ್ರಕರಣ ಪತ್ತೆಯಾಗಿದೆ. ಕಾಸರಗೋಡು ಮಂಗಳೂರಿನಿಂದ ಕೇವಲ 20 ಕಿ.ಮೀ ಅಂತರದಲ್ಲಿದೆ. ಒಂದೊಮ್ಮೆ ಸಂಚಾರ ಮುಕ್ತಗೊಳಿಸಿದರೆಕೊರೊನಾ ಪ್ರಕರಣಗಳು ಹೆಚ್ಚಾಗುವ ಅಪಾಯವಿದೆ. ಅಲ್ಲದೆ ಇಲ್ಲಿನ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಲಿದೆ. ಆದ್ದರಿಂದ ಸಂಚಾರ ನಿರ್ಬಂಧ ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಕ್ರಮವನ್ನು ಸಮರ್ಥಿಸಿಕೊಂಡರು.