ನವದೆಹಲಿ, ಎ.02 (Daijiworld News/MB) : ದೆಹಲಿ ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿ ಬಂಗ್ಲೇವಾಲಿ ಮಸೀದಿ ತೆರವುಗೊಳಿಸುವಂತೆ ಮನವಿ ಮಾಡಿದರೂ ನಿಜಾಮುದ್ದೀನ್ ಮರ್ಕಜ್ ಮುಖ್ಯಸ್ಥ ಮೌಲಾನಾ ಸಾದ್ ಕೇಳದೆ ಇದ್ದ ಕಾರಣದಿಂದಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಬಂದು ಮಸೀದಿಯನ್ನು ತೆರವುಗೊಳಿಸಿದರು.
ದೋವಲ್ ಅವರು ಮಾರ್ಚ್ 28-29ರ ರಾತ್ರಿ 2 ಗಂಟೆಗೆ ಮರ್ಕಜ್ಗೆ ಹೋಗಿ ಮಸೀದಿಯಲ್ಲಿರುವ ಜನರನ್ನು ಕೊರೊನಾ ತಪಾಸಣೆ ನಡೆಸಿ ಕ್ವಾರಂಟೈನ್ನಲ್ಲಿರಿಸುವಂತೆ ಮೌಲಾನಾ ಸಾದ್ ಅವರ ಮನವೊಲಿಕೆ ಮಾಡಿದ್ದಾರೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮರ್ಕಜ್ನಲ್ಲಿ ಮಾರ್ಚ್ 18ರಂದು ಭಾಗಿಯಾಗಿದ್ದ ಇಂಡೋನೇಷ್ಯಾದ 9 ಪ್ರಜೆಗಳಿಗೆ ಕೊರೊನಾ ಇರುವುದು ದೃಢಪಟ್ಟಿದೆ ಎಂದು ವರದಿಯಾದ ಹಿನ್ನಲೆಯಲ್ಲಿ ಈ ಬಗ್ಗೆ ಭದ್ರತಾ ಸಂಸ್ಥೆಯು ಎಲ್ಲ ರಾಜ್ಯದ ಪೊಲೀಸ್ ಮತ್ತು ಇತರ ಸಂಸ್ಥೆಗಳಿಗೆ ಮಾಹಿತಿ ನೀಡಿತ್ತು . ಈ ನಡುವೆ ಮರ್ಕಜ್ 167 ತಬ್ಲಿಗಿ ನೌಕರರನ್ನು ಮಾರ್ಚ್ 27, 28 ಮತ್ತು 29ರಂದು ಆಸ್ಪತ್ರೆಗೆ ದಾಖಲಿಸಿತ್ತು.
ಮಸೀದಿ ಶುಚಿಮಾಡಲು ದೋವಲ್ ಅವರು ತಿಳಿಸಿದ ಬಳಿಕವೇ ಶುಚಿತ್ವಕ್ಕೆ ಒಪ್ಪಿದ್ದಾರೆ ಎಂದು ಹೇಳಲಾಗಿದ್ದು ದೋವಲ್ ಅವರು ಕಳೆದ ದಶಕಗಳಿಂದ ಭಾರತದ ಒಳಗೆ ಮತ್ತು ಹೊರಗೆ ಹಲವಾರು ಮುಸ್ಲಿಂ ಚಳವಳಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ಹಾಗೆಯೇ ಇದೀಗ ಎರಡನೇ ಹಂತದ ಕಾರ್ಯಾಚರಣೆ ಇಲ್ಲಿ ನಡೆಸಲಾಗುತ್ತಿದ್ದು ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಎಲ್ಲಾ ವೀಸಾಗಳ ಪರಿಶೀಲನೆ ಮಾಡಲಾಗುತ್ತದೆ.
ವಿದೇಶಿಯರ ಹೊರತಾಗಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಎಲ್ಲ ಭಾರತೀಯರನ್ನು ಪತ್ತೆ ಹಚ್ಚಿ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗುವುದು ಎಂದು ವರದಿ ತಿಳಿಸಿದೆ.
ದೆಹಲಿಯಲ್ಲಿರುವ ಮರ್ಕಜ್ನಲ್ಲಿ 216 ಮಂದಿ ವಿದೇಶೀಯರಿದ್ದು ಆದರೆ ದೇಶದ ವಿವಿಧ ಭಾಗಗಳಲ್ಲಿ 800ಕ್ಕಿಂತಲೂ ಹೆಚ್ಚು ವಿದೇಶಿಯರಿದ್ದಾರೆ. ಈ ಪೈಕಿ ಬಹುತೇಕರು ಇಂಡೊನೇಷ್ಯಾ, ಮಲೇಷ್ಯಾ ಮತ್ತು ಬಾಂಗ್ಲಾದೇಶದವರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಹಾಗೆಯೇ ಪ್ರಾಥಮಿಕ ವರದಿ ಪ್ರಕಾರವಾಗಿ ಜನವರಿಯ ಬಳಿಕ ಸುಮಾರು 2,000 ವಿದೇಶಿಯರು ಮರ್ಕಜ್ನಲ್ಲಿ ಭಾಗಿಯಾಗಿದ್ದು ಈ ಪೈಕಿ ಬಹುತೇಕರು ಭಾರತಕ್ಕೆ ವೀಸಾ ನಿಯಮ ಉಲ್ಲಂಘನೆ ಮಾಡಿ ಬಂದವರಾಗಿದ್ದಾರೆ.