ಬೀದರ್ , ಏ 2 (Daijiworld News/MSP): ಕೊರೊನಾ ಮಟ್ಟ ಹಾಕಲು ಭಾರತ ಸರ್ಕಾರ ಶ್ರಮಿಸುತ್ತಿದ್ದರೆ, ಇದಕ್ಕೆ ಅಡ್ಡಗಾಲಿನಂತೆ ದೆಹಲಿಯ ನಿಜಾಮುದ್ದೀನ್ ಜಮಾತ್ ಸಭೆ ಪರಿಣಮಿಸಿದೆ. ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ ಬೀದರ್ ನ 11 ಜನರಲ್ಲಿ ಮಾರಕ ಸೋಂಕು ತಗುಲಿರುವ ಖಚಿತವಾಗಿದೆ.
ಬೀದರ್ ಜಿಲ್ಲೆಯಿಂದ ದೆಹಲಿಯಲ್ಲಿ ನಡೆದ ಜಮಾತ್ ಸಭೆಗೆ ಸುಮಾರು 27 ಮಂದಿ ತೆರಳಿದ್ದು, ಈ ಪೈಕಿ 11 ಜನರಲ್ಲಿ ಕೋವಿಡ್ -೧೯ ಪಾಸಿಟಿವ್ ಬಂದಿರುವ ಆಘಾತಕಾರಿ ಸುದ್ದಿ ಹೊರಬಿದ್ದಾರೆ.
ಮಾ.13 ರಿಂದ 15ರವರೆಗೆ ಆಯೋಜಿಸಿದ್ದ ಧಾರ್ಮಿಕ ಸಭೆಗೆ ಬೀದರ್ ಜಿಲ್ಲೆಯಿಂದ 27 ಮಂದಿ ತೆರಳಿದ್ದರು. ಈ ಪೈಕಿ 11 ಮಂದಿಯನ್ನು ವೈದ್ಯಕೀಯ ತಪಾಸಣೆ ನಡೆಸಿದ್ದು, ಅವರ ರಕ್ತದ ಸ್ಯಾಂಪಲ್ ಹಾಗೂ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆಕಳುಹಿಸಲಾಗಿದೆ. ಈ ಪೈಕಿ 11 ಮಂದಿಗೂ ಕೊರೊನಾ ಪಾಸಿಟಿವ್ ಬಂದಿರುವುದು ಖಚಿತವಾಗಿದ್ದು, ಉಳಿದ 16 ಮಂದಿಯ ವೈದ್ಯಕೀಯ ವರದಿ ಬರಬೇಕಿದೆ ಎಂದು ಜಿಲ್ಲಾಧಿಕಾರಿ ಡಾ.ಮಹದೇವ್ ಹೇಳಿದ್ದಾರೆ.
ಸೋಂಕಿತರು ಇರುವ ಪ್ರದೇಶಗಳಲ್ಲಿ ಕಟ್ಟೆಚ್ಚರ ಹಾಗೂ ಇವರು ಸಂಪರ್ಕಿಸಿದ ಜನರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಡಿಸಿ ತಿಳಿಸಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಈವರೆಗೆ ಒಂದೂ ಪಾಸಿಟಿವ್ ಪ್ರಕರಣ ವರದಿಯಾಗದಿದ್ದರಿಂದ ಜನ ನಿಟ್ಟಿಸಿರು ಬಿಟ್ಟಿದ್ದರು ರಾಜ್ಯದಲ್ಲಿ ಏಕಕಾಲಕ್ಕೆ ಅತಿಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗುವ ಸಂಚಲನ ಸೃಷ್ಟಿಸಿದೆ.