ನವದೆಹಲಿ, ಎ.02 (Daijiworld News/MB) : ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲ್ಲೇ ಇದ್ದು ಬುಧವಾರ ಒಂದೇ ದಿನ ದೇಶದಲ್ಲಿ 388 ಹೊಸ ಪ್ರಕರಣಗಳು ಪತ್ತೆಯಾಗಿದೆ. ಕಳೆದ ಶನಿವಾರ 1000 ದಾಟಿದ್ದ ಸೋಂಕಿತರ ಸಂಖ್ಯೆ ಇದೀಗ ಕೇವಲ ನಾಲ್ಕು ದಿನಗಳಲ್ಲಿ ದ್ವಿಗುಣಗೊಂಡು 2000ಕ್ಕೆ ತಲುಪಿದೆ.
ಮಹಾರಾಷ್ಟ್ರದಲ್ಲಿ ಸತತ ಮೂರನೇ ದಿನವೂ ಮೂರಂಕಿ ಪ್ರಕರಣ ದಾಖಲಾಗಿದ್ದು ಬುಧವಾರ ಮಧ್ಯರಾತ್ರಿ ವೇಳೆಗೆ ದೇಶದ ಸೋಂಕಿತರ ಸಂಖ್ಯೆ 1,996 ಆಗಿತ್ತು. ಗುರುವಾರ ನಿಜಾಮುದ್ದೀನ್ ಜಮಾತ್ ಸಭೆಯಲ್ಲಿ ಭಾಗವಹಿಸಿದ ಬೀದರ್ನ 11 ಜನರಲ್ಲಿ ಸೋಂಕು ದೃಢಪಟ್ಟಿದ್ದು ಬೇರೆ ರಾಜ್ಯಗಳಲ್ಲಿ ದೃಢಪಟ್ಟ ಸೋಂಕಿತರ ಸಂಖ್ಯೆ ಸೇರಿ ಭಾರತದಲ್ಲಿ ಸೋಂಕಿತರ ಸಂಖ್ಯೆ 2,000 ದಾಟಿದೆ.
ಕಳೆದ 24 ಗಂಟೆಗಳಲ್ಲಿ ಕೊರೊನಾದಿಂದಾಗಿ ಭಾರತದಲ್ಲಿ 9 ಮಂದಿ ಮೃತಪಟ್ಟಿದ್ದು ಒಟ್ಟು ಈ ಸೋಂಕಿಗೆ ಭಾರತದಲ್ಲಿ 50 ಜನರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ 33, ದೆಹಲಿಯಲ್ಲಿ 32, ರಾಜಾಸ್ತಾನದಲ್ಲಿ 27, ಕೇರಳದಲ್ಲಿ 24, ಮಧ್ಯಪ್ರದೇಶದಲ್ಲಿ 20 ಕೊರೊನಾ ಪ್ರಕರಣಗಳು ಬುಧವಾರ ದೃಢಪಟ್ಟಿದೆ.
ಇನ್ನು ಉತ್ತರಪ್ರದೇಶದಲ್ಲಿ 25 ವರ್ಷದ ಯುವಕ ಈ ಸೋಂಕಿಗೆ ಬಲಿಯಾಗಿದ್ದು ದೇಶದಲ್ಲಿ ಕೊರೊನಾಗೆ ಬಲಿಯಾದ ಅತ್ಯಂತ ಕಿರಿಯ ಅವರಾಗಿದ್ದಾರೆ. ಹಾಗೆಯೇ ರಾಜ್ಯದಲ್ಲಿ ಕೊರೊನಾದಿಂದಾಗಿ ಸಾವನ್ನಪ್ಪಿದ ಪ್ರಕರಣ ಇದೇ ಮೊದಲನೆಯದ್ದಾಗಿದೆ.