ಹೈದರಾಬಾದ್, ಎ.02 (Daijiworld News/MB) : ಬುಧವಾರ ಕೊರೊನಾ ಸೋಂಕಿನಿಂದಾಗಿ ತೆಲಂಗಾಣದಲ್ಲಿ ಮೂವರು ಮೃತಪಟ್ಟಿದ್ದು ಇವರೆಲ್ಲರೂ ಕಳೆದ ತಿಂಗಳು ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದಿದ್ದ ತಬ್ಲೀಗ್ ಜಮಾತ್ನ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಭೀತಿ ಇನ್ನಷ್ಟು ಹೆಚ್ಚಿದೆ.
ಹಾಗೆಯೇ ತೆಲಂಗಾಣದಲ್ಲಿ ಕೊರೊನಾದ ಮೂವತ್ತು ಹೊಸ ಪ್ರಕರಣಗಳು ದೃಢಪಟ್ಟಿದೆ ಎಂದು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಕಚೇರಿಯ ಅಧಿಕೃತ ಪ್ರಕಟಣೆಯಲ್ಲಿ ಗುರುವಾರ ತಿಳಿಸಲಾಗಿದೆ.
ಈ ಹಿಂದೆ ರಾಜ್ಯದಲ್ಲಿ ಈ ಸೋಂಕಿನಿಂದಾಗಿ ಆರು ಮಂದಿ ಮೃತಪಟ್ಟಿದ್ದು ಅವರೆಲ್ಲರೂ ತಬ್ಲೀಗ್ ಜಮಾತ್ನ ಧಾರ್ಮಿಕ ಸಭೆಯಲ್ಲಿ ಭಾಗಿವಹಿಸಿದ್ದು ಬುಧವಾರ ಮತ್ತೆ ಮೂವರು ಅವರೂ ಕೂಡಾ ಅದೇ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. ಪ್ರಸ್ತುತ ಸೋಂಕು ದೃಢಪಟ್ಟಿರುವ ಎಲ್ಲ 30 ಮಂದಿಯೂ ದೆಹಲಿಯ ನಿಜಾಮುದ್ದೀನ್ಗೆ ಭೇಟಿ ನೀಡಿದ ಹಿನ್ನೆಲೆ ಹೊಂದಿದ್ದಾರೆ. ಸೋಂಕಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಕಳೆದ ತಿಂಗಳು ನಿಜಾಮುದ್ದೀನ್ನಲ್ಲಿ ನಡೆದ ಸಭೆಯಲ್ಲಿ ಸುಮಾರು 8,500 ಮಂದಿ ಭಾಗಿಯಾಗಿದ್ದು ಅವರೆಲ್ಲರ ಗುರುತು ಪತ್ತೆ ಮಾಡಬೇಕಿದೆ.