ಶಿವಮೊಗ್ಗ/ ಕೊಡಗು, ಏ 2 (Daijiworld News/MSP): ಕೊರೊನಾ ವೈರಸ್ ಭೀತಿಯಿಂದ ವಿವಿಧ ಆರೋಪದಡಿ ಭಾಗಿಯಾಗಿ ಕಾರಾಗೃಹ ಶಿಕ್ಷೆ ಅನುಭವಿಸುತ್ತಿದ್ದ ಮಡಿಕೇರಿ ಮತ್ತು ಶಿವಮೊಗ್ಗ ವಿಚಾರಣಾಧೀನ ಖೈದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ.
ಶಿವಮೊಗ್ಗ ನಗರದ ಹೊರ ವಲಯದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗವಹಿಸಿ ಶಿಕ್ಷೆ ಅನುಭವಿಸುತ್ತಿದ್ದ 18 ಮಂದಿ ವಿಚಾರಣಾಧೀನ ಖೈದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಇನ್ನು ಮಡಿಕೇರಿಯಲ್ಲಿ 7 ವರ್ಷಕ್ಕಿಂತ ಕಡಿಮೆ ಶಿಕ್ಷೆಗೆ ಒಳಗಾಗಿದ್ದ ವಿಚಾರಣಾಧೀನ 11 ಆರೋಪಿಗಳನ್ನು ಮತ್ತು 7 ವರ್ಷದ ಅವಧಿಯವರೆಗೆ ಆರೋಪ ಸಾಬೀತಾಗಿ ಶಿಕ್ಷೆಗೆ ಗುರಿಯಾಗಿದ್ದ ಒಬ್ಬ ಅಪರಾಧಿಯನ್ನು ಪೆರೋಲ್ ಮೇಲೆ ಬುಧವಾರ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ತಾತ್ಕಾಲಿಕವಾಗಿ ಬಿಡುಗಡೆ ಮಾಡಲಾಯಿತು.
ಈ ವೇಳೆ ಬಿಡುಗಡೆಯಾದ ಖೈದಿಗಳನ್ನು ಪೊಲೀಸರ ಸಹಾಯದಿಂದ ಅವರವರ ಸ್ವಗ್ರಾಮಗಳಿಗೆ ಕಳುಹಿಸಲಾಯಿತು.
ಪೆರೋಲ್ ಅವಧಿ ಮುಗಿದ ನಂತರ ಕಾರಾಗೃಹಕ್ಕೆ ವಾಪಸ್ಸಾಗಬೇಕು. ಕಾರಾಗೃಹದಿಂದ ಹೊರಗಡೆ ಹೋದ ಬಳಿಕ ಯಾವುದೇ ದುಷ್ಕೃತ್ಯದಲ್ಲಿ ಭಾಗಿಯಾಗಬಾರದು. ಅಲ್ಲದೇ ಕೊರೊನಾ ಭೀತಿ ಇರುವ ಕಾರಣ ಮನೆಯಿಂದ ಹೊರಗೆ ಬಾರದಂತೆ ಮನೆಯಲ್ಲಿಯೇ ಇರುವಂತೆ ಎಲ್ಲಾ ವಿಚಾರಣಾಧೀನ ಖೈದಿಗಳಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.