ಲಕ್ನೋ, ಎ.02 (Daijiworld News/MB) : ವಿಶ್ವದಾದ್ಯಂತ ಕೊರೊನಾ ವೈರಸ್ ಭೀತಿ ಹುಟ್ಟಿಸಿದ್ದು ಉತ್ತರ ಪ್ರದೇಶದಲ್ಲಿ ಹೊಸದಾಗಿ ಹುಟ್ಟಿದ ಇಬ್ಬರು ಹಸುಳೆಗಳಿಗೆ 'ಕೊರೊನಾ' ಮತ್ತು 'ಲಾಕ್ಡೌನ್' ಎಂದು ಹೆಸರಿಡಲಾಗಿದೆ.
ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಇಬ್ಬರು ಮಕ್ಕಳಿಗೆ ಈ ರೀತಿ ಕೊರೊನಾ ಹಾಗೂ ಲಾಕ್ಡೌನ್ ಎಂದು ಹೆಸರಿಡಲಾಗಿದೆ ಎಂದು ಮನೆಯವರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಗೋರಖ್ಪುರದಲ್ಲಿ ದೇಶದಲ್ಲಿ ಜನತಾ ಕರ್ಫ್ಯೂ ಇದ್ದ ದಿನ ಜನಿಸಿದ ಹೆಣ್ಣು ಮಗುವಿಗೆ ಕೊರೊನಾ ಎಂದು ಹೆಸರಿಡಲಾಗಿದೆ. ಇದಾದ ಒಂದು ವಾರ ನಂತರ ದಿಯೋರಿಯಾ ಜಿಲ್ಲೆಯಲ್ಲಿ ಹುಟ್ಟಿದ ಗಂಡು ಮಗುವಿಗೆ ಲಾಕ್ಡೌನ್ ಎಂದು ನಾಮಕರಣ ಮಾಡಲಾಗಿದೆ.
ಈ ಕುರಿತಾಗಿ ಮಾತನಾಡಿದ ದಿಯೋರಿಯಾ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಆರ್.ಪಿ. ತ್ರಿಪಾಠಿ, ಭಾನುವಾರ ಸಂಜೆ ಜನಿಸಿದ ಮಗುವಿಗೆ ಲಾಕ್ಡೌನ್ ಎಂದು ಹೆಸರಿಡಲಾಯಿತು. ನಾವೆಲ್ಲರೂ ಲಾಕ್ಡೌನ್ ಪಾಲಿಸುವುದು ಅನಿವಾರ್ಯ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮಗುವಿನ ತಂದೆ ಪವನ್ ಪ್ರಸಾದ್ 'ಜನರು ಕೊರೊನಾ ಬಗ್ಗೆ ತೆಗೆದುಕೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳ ಬಗ್ಗೆ ನನ್ನ ಮಗು ನೆನಪಿಸಲಿದೆ ಎಂದು ಹೇಳಿದ್ದಾರೆ.
ಇನ್ನು ಇನ್ನೊಂದು ಮಗುವಿನ ಚಿಕ್ಕಪ್ಪ ಈ ಕುರಿತಾಗಿ ಮಾತನಾಡಿ, ನಾನು ನನ್ನ ಅತ್ತಿಗೆ (ಮಗುವಿನ ತಾಯಿ)ಯಿಂದ ಅನುಮತಿ ಪಡೆದು, ಮಗುವಿಗೆ ಕೊರೊನಾ ಎಂದು ನಾಮಕರಣ ಮಾಡಿದೆ. ಕಾರಣ, ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ದೇಶದ ಜನರು ಒಂದುಗೂಡಿದ್ದಾರೆ. ದೇಶದ ಏಕತೆಯ ಸಂಕೇತವಾಗಿ ಮಗುವಿಗೆ ಕೊರೊನಾ ಹೆಸರಿಟ್ಟೆ ಎಂದು ಹೇಳಿದ್ದಾರೆ.