ಬೆಂಗಳೂರು, ಎ.02 (Daijiworld News/MB) : ಕೊರೊನಾ ಕುರಿತಾಗಿ ಮಾಹಿತಿ ಸಂಗ್ರಹ ಮಾಡಲು ತೆರಳಿದ್ದ ಆಶಾ ಕಾರ್ಯಕರ್ತೆಯರು ಹಾಗೂ ಶುಶ್ರೂಷಕಿಯರ ಮೇಲೆ ಕಿಡಿಗೇಡಿಗಳು ಮಾಡಿದ ಘಟನೆ ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಹಲ್ಲೆಗಿಂತಲೂ ಮುಖ್ಯವಾಗಿ ಮಸೀದಿಯಲ್ಲಿ ಮಾಹಿತಿ ನೀಡಬೇಡಿ ಎಂದು ಮೈಕ್ನಲ್ಲಿ ಘೋಷಣೆ ಮಾಡಿದ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ.
ಆಶಾ ಕಾರ್ಯಕರ್ತೆಯರ ಮನೆಗೆ ತೆರಳಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಸಾಂತ್ವನ ಹೇಳಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಹಲ್ಲೆಯ ಕುರಿತಾಗಿ ಮಾತನಾಡಿದ ಆಶಾ ಕಾರ್ಯಕರ್ತೆ ಕೃಷ್ಣವೇಣಿ, "ಇಲ್ಲಿನ ಬಡಾವಣೆಯೊಂದರಲ್ಲಿ ಮನೆಗೆಲಸದಾಕೆಗೆ ಕೊರೊನಾ ಸೋಂಕು ತಗುಲಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಹೆಚ್ಚಿನ ಸಮೀಕ್ಷೆಗೆ ತೆರಳಿದ್ದೆವು. ಮನೆ ಮನೆಗೆ ತೆರಳಿ ಸೋಂಕು ಇರುವ ಅಥವಾ ಸೋಂಕು ಲಕ್ಷಣಗಳ ಬಗ್ಗೆ ಮಾಹಿತಿ ಪಡೆದು ದಾಖಲೆ ಮಾಡುತ್ತಿದ್ದೆವು. ಆ ಸಂದರ್ಭದಲ್ಲಿ ಮಾಹಿತಿ ಕೇಳುವವರಿಗೆ ಮಾಹಿತಿ ನೀಡಬೇಡಿ. ದಾಖಲೆಗಳನ್ನು ಹರಿದು ಹಾಕಿ ಎಂದು ಮಸೀದಿಯಲ್ಲಿ ಘೋಷಣೆ ಕೇಳಿಬಂದಿದೆ. ಈ ಸಂದರ್ಭದಲ್ಲಿ ಮನೆಯಲ್ಲಿ ಇದ್ದ ಮುಸ್ಲಿಮರೆಲ್ಲರೂ ಹೊರಬಂದು ಸುತ್ತುವರಿದು ನೀವು ಯಾಕೆ ಬಂದಿದ್ದೀರಿ. ಏನು ಮಾಹಿತಿ ಪಡೆಯುತ್ತಿದ್ದೀರಿ. ನಿಮಗೆ ಇಲ್ಲಿಗೆ ಬರಲು ಯಾರು ಹೇಳಿದ್ದು ಎಂದು ನಮಗೆ ಬೈಯ್ಯಲು ಆರಂಭಿಸಿದರು ಎಂದು ಹೇಳಿದ್ದಾರೆ.
ಮೊದಲು ಮನೆಗೆ ಹೋಗಿ ಎಂದು ಹೇಳಿದ ಅವರು ಬ್ಯಾಗ್ ಕಿತ್ತುಕೊಂಡರು, ಬಳಿಕ ಯಾರಿಗೂ ಫೋನ್ ಮಾಡದಂತೆ ಮೊಬೈಲ್ ಕೂಡಾ ಕಿತ್ತುಕೊಂಡರು. ಆ ಪೈಕಿ ಕೆಲವರು ಗಾಂಜಾ ಸೇವಿಸಿದ್ದು ಮದ್ಯಪಾನ ಮಾಡಿದ್ದರು. ಮೈ ಮೇಲೆಯೇ ಬಂದು ಬೀಳಲು ಯತ್ನಿಸಿದರು. ನಮಗೆ ಆ ಸಂದರ್ಭದಲ್ಲಿ ಭಯವಾಯಿತು ಎಂದಿದ್ದಾರೆ.
ಕಳೆದ ಐದು ವರ್ಷದಿಂದ ಆಶಾ ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಜನರ ಆರೋಗ್ಯದ ಮಾಹಿತಿ ಪಡೆಯಲು ನಾವು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ. ಆದರೂ ಎಲ್ಲರೂ ದೌರ್ಜನ್ಯ ಮಾಡಿದ್ದಾರೆ. ಬಹಳ ಬೇಸರವಾಗಿದೆ ಎಂದು ನೊಂದು ನುಡಿದಿದ್ದಾರೆ.
ಹಾಗೆಯೇ ಜೊತೆಗಿದ್ದವರು ಯಲಹಂಕದಲ್ಲಿ, ಸಾಧಿಕ್ನಗರ ಮತ್ತುಇನ್ನೊಂದು ಬಡಾವಣೆಯಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿರುವುದಾಗಿ ಕೃಷ್ಣವೇಣಿ ಹೇಳಿದ್ದಾರೆ.
ಇನ್ನು ಬೆಂಗಳೂರಿನ ಬ್ಯಾಟರಾಯನಪುರದ ಸಾದಿಕ್ ಲೇಔಟ್ನಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಶುಶ್ರೂಷಕಿಯರು ಕೊರೊನಾ ಕುರಿತಾದ ಮಾಹಿತಿ ಸಂಗ್ರಹಕ್ಕೆ ತೆರಳಿದ್ದರು. ಆದರೆ ಇವರಿಗೆ ಮಾಹಿತಿಯನ್ನು ನೀಡಲು ಸ್ಥಳೀಯ ಮುಸ್ಲಿಮರು ನಿರಾಕರಣೆ ಮಾಡಿದ್ದಲ್ಲದೇ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಿದ್ದಾರೆ.