ಮುಂಬೈ, ಎ.02 (Daijiworld News/MB) : ಕೊರೊನಾ ವೈರಸ್ ತಡೆಗಟ್ಟುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಲಾಕ್ಡೌನ್ಗೆ ಆದೇಶ ನೀಡಿದ್ದು ಈ ಆದೇಶ ಉಲ್ಲಂಘನೆ ಮಾಡಿ ರಸ್ತೆಯಲ್ಲಿ ತಿರುಗಾಡುತ್ತಿದ್ದ ಮೂವರು ವ್ಯಕ್ತಿಗಳಿಗೆ ಮಹಾರಾಷ್ಟ್ರದ ಬಾರಾಮತಿ ಕೋರ್ಟ್ ಮೂರು ದಿನಗಳ ಕಾಲ ಜೈಲುಶಿಕ್ಷೆ ವಿಧಿಸಿ ಆದೇಶ ನೀಡಿದ್ದು ಇದು ಲಾಕ್ಡೌನ್ ಉಲ್ಲಂಘಿಸಿದವರಿಗೆ ಶಿಕ್ಷೆಯಾದ ಮೊದಲ ಪ್ರಕರಣವಾಗಿದೆ.
ನ್ಯಾಯಾಧೀಶ ಜೆ.ಜೆ.ಬಾಚುಲ್ಕರ್ ಅವರು, ಆರೋಪಿಗಳಾದ ಅಫ್ಜಲ್ ಅತ್ತಾರ್ (39ವರ್ಷ), ಚಂದ್ರಕುಮಾರ್ ಶಾ (38ವರ್ಷ) ಹಾಗೂ ಅಕ್ಷಯ್ ಶಾ(32ವರ್ಷ)ಗೆ ಮೂರು ದಿನ ಜೈಲುಶಿಕ್ಷೆ ವಿಧಿಸಿ ಪ್ರತಿಯೊಬ್ಬರಿಗೂ 500 ರೂಪಾಯಿ ದಂಡ ವಿಧಿಸಿದ್ದಾರೆ.
ಪುಣೆ ಜಿಲ್ಲೆಯ ಬಾರಾಮತಿ ನಗರದಲ್ಲಿ ಯಾವುದೇ ಕಾರಣವಿಲ್ಲದೆ ಸುಮ್ಮನೆ ಅಲೆದಾಡುತ್ತಿದ್ದ ಈ ಮೂವರು ಯುವಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದೇಶ ಉಲ್ಲಂಘಿಸಿದ್ದಕ್ಕೆ ಕಡಿಮೆ ಪ್ರಮಾಣದ ಶಿಕ್ಷೆ ಕೋರ್ಟ್ ವಿಧಿಸಿದ್ದು ಇನ್ನು ಮುಂದೆ ತಪ್ಪೆಸಗಿದರೆ ಆರೋಪಿಗಳ ಪಾಸ್ ಪೋರ್ಟ್ ಹಾಗೂ ಇತರ ಲೈಸೆನ್ಸ್ಗಳನ್ನು ವಶಕ್ಕೆ ಪಡೆಯುವ ಅವಕಾಶವು ಇದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಹಾಗೆಯೇ ಲಾಕ್ ಡೌನ್ ಆದೇಶ ಉಲ್ಲಂಘಿಸಿ ಹೊರಬಂದ 250 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.