ಬೆಂಗಳೂರು, ಏ 2 (Daijiworld News/MSP): ಕೊರೊನಾ ವಿರುದ್ಧದ ಹೋರಾಟ ಸುದೀರ್ಘವಾದುದು. ಲಾಕ್ಡೌನ್ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಲಾಕ್ಡೌನ್ ವಿಫಲವಾದರೆ ಅದಕ್ಕೆ ಮುಖ್ಯಮಂತ್ರಿಗಳನ್ನೇ ಹೊಣೆಯಾಗಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ತಿಳಿಸಿದ್ದಾರೆ.
ಇಂದು ಪ್ರಧಾನಿ ಮೋದಿ ಅವರೊಂದಿಗೆ ನಡೆದ ವಿಡಿಯೋ ಕಾನ್ಫರೆನ್ಸ್ ಬಳಿಕ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಯಾವುದೇ ಕಾರಣಕ್ಕೂ ಲಾಕ್ ಡೌನ್ ಉಲ್ಲಂಘನೆಯಾಗಬಾರದು, ಲಾಕ್ಡೌನ್ ಅವಧಿಯಲ್ಲಿ ಯಾವುದೇ ಅಗತ್ಯ ವಸ್ತುಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕೆಂದು ಪ್ರಧಾನಿ ತಿಳಿಸಿದ್ದಾಗಿ ಸಿಎಂ ಮಾಹಿತಿ ನೀಡಿದರು.
ಇನ್ನು ರಾಜ್ಯದಲ್ಲಿ ಕೊರೊನಾ ವೈರಸ್ ತ್ವರಿತಗತಿಯಲ್ಲಿ ಪತ್ತೆ ಹಚ್ಚಿ ಐಸೋಲೇಷನ್ ಒದಗಿಸಬೇಕು. ವೈದ್ಯಕೀಯ ಸಿಬ್ಬಂದಿ ಕೊರತೆಯಿದ್ದಲ್ಲಿ ಪರ್ಯಾಯ ವೈದ್ಯಕೀಯ ಸಿಬ್ಬಂದಿ ಬಳಕೆ ಮಾಡಿಕೊಳ್ಳಿ. ಕೇಂದ್ರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಪ್ರಧಾನಿ ತಿಳಿಸಿದರು. ಇನ್ನು ಕೊರೊನಾ ತಡೆಗೆ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರನ್ನು ಬಳಕೆ ಮಾಡಿಕೊಳ್ಳಬೇಕು. ಎಲ್ಲ ರಾಜ್ಯಗಳಲ್ಲಿ ಅಗತ್ಯ ವಸ್ತುಗಳ ಪೂರೈಕೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಕೃಷಿ ಚಟುವಟಿಕೆಗಳಿಗೆ ಲಾಕ್ ಡೌನ್ ನಿಂದ ವಿನಾಯಿತಿ ನೀಡಬೇಕು. ಯಾವುದೇ ಅನಾಹುತ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕೆಂದು ಪ್ರಧಾನಿ ಸಲಹೆ ಕೊಟ್ಟಿದ್ದಾರೆ. ಇದರೊಂದಿಗೆ ಲಾಕ್ ಡೌನ್ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಪ್ರಧಾನಿ ಖಡಕ್ ಸೂಚನೆ ಕೊಟ್ಟಿದ್ದಾರೆಂದು ಸಿಎಂ ತಿಳಿಸಿದರು.