ತಿರುವನಂತಪುರ, ಎ.02 (Daijiworld News/MB) : ಕೇರಳ ಸರ್ಕಾರ ವೈದ್ಯರಿಂದ ಪ್ರಿಸ್ಕ್ರಿಪ್ಷನ್ ತಂದವರಿಗೆ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದು ಗುರುವಾರ ಕೇರಳ ಹೈಕೋರ್ಟ್ ಅದಕ್ಕೆ ತಡೆಯಾಜ್ಞೆ ವಿಧಿಸಿದೆ.
ಕೊರೊನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ದೇಶವನ್ನೇ ಲಾಕ್ಡೌನ್ ಮಾಡಿ ಆದೇಶಿಸಿದ್ದು ಬಾರ್ಗಳು ಕೂಡಾ ಬಂದ್ ಆಗಿದೆ. ಇದರಿಂದಾಗಿ ಹಲವಾರು ಮದ್ಯವ್ಯಸನಿಗಳು ಮದ್ಯ ಸಿಗದ ಕಾರಣದಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಹಿನ್ನಲೆಯಲ್ಲಿ ಕೇರಳ ಸರ್ಕಾರ ಮದ್ಯ ಅಗತ್ಯವೆಂದು ಇರುವವರು ವೈದ್ಯರ ಬಳಿಯಿಂದ ಔಷಧ ಚೀಟಿ(ಪ್ರಿಸ್ಕ್ರಿಪ್ಷನ್) ತರಬೇಕು ಎಂದು ಆದೇಶಿಸಿತ್ತು.
ಇದೀಗ ಕೇರಳ ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿದ ಸಂಸದ ಟಿಎನ್ ಪ್ರತಾಪನ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಮದ್ಯ ನೀಡುವ ಸರ್ಕಾರದ ಆದೇಶಕ್ಕೆ ಮೂರು ವಾರಗಳ ಕಾಲ ತಡೆಯಾಜ್ಞೆ ವಿಧಿಸಿದೆ.
ಕೊರೊನಾ ಲಾಕ್ಡೌನ್ ಹಿನ್ನಲೆಯಲ್ಲಿ ಬಾರ್ಗಳು ಮುಚ್ಚಲಾಗಿದ್ದು ಈ ಕಾರಣದಿಂದಾಗಿ ಕೇರಳದಲ್ಲಿ ಈವರೆಗೆ ಒಂಬತ್ತು ಮದ್ಯವ್ಯಸನಿಗಳು ಸಾವನ್ನಪ್ಪಿದ್ದಾರೆ. ಈ ಪೈಕಿ ಏಳು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು ಇಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಈ ಕಾರಣದಿಂದಾಗಿ ಅಬಕಾರಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವೈದ್ಯರಿಂದ ಔಷಧ ಚೀಟಿ (ಪ್ರಿಸ್ಕ್ರಿಪ್ಷನ್) ತಂದವರಿಗೆ ಮಾತ್ರ ಮದ್ಯ ಮಾರಾಟ ಮಾಡಲಾಗುತ್ತದೆ ಎಂದು ತಿಳಿಸಿದ್ದರು.