ವಾಷಿಂಗ್ಟನ್, ಎ.03 (DaijiworldNews/PY) : ಮಹಾಮಾರಿ ಕೊರೊನಾ ವೈರಸ್ ವಿರುದ್ದ ಹೋರಾಡುವ ನಿಟ್ಟಿನಲ್ಲಿ ವಿಶ್ವ ಬ್ಯಾಂಕ್ ಭಾರತಕ್ಕೆ 1 ಬಿಲಿಯನ್ ಡಾಲರ್ ತುರ್ತು ಧನ ಸಹಾಯ ನೀಡಲು ಗುರುವಾರ ಅನುಮೋದನೆ ನೀಡಿದೆ.
ಕೊರೊನಾ ವೈರಸ್ ಸೋಂಕಿಗೆ ಇಲ್ಲಿಯವರೆಗೆ ಭಾರತದಲ್ಲಿ 53 ಜನರು ಮೃತಪಟ್ಟಿದ್ದು, 2,000 ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ.
ಕೊರೊನಾ ಸೋಂಕಿನ ವಿರುದ್ದ ಹೋರಾಡಲು ವಿಶ್ವ ಬ್ಯಾಂಕ್ ತನ್ನ ಮೊದಲ ಯೋಜನೆಯಲ್ಲಿ 25 ದೇಶಗಳಿಗೆ ಸಹಾಯ ಮಾಡಲಿದೆ.
40 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮುಂದಿನ ದಿನಗಳಲ್ಲಿ ಕೊರೊನಾ ಸೋಂಕಿನ ವಿರುದ್ದ ತ್ವರಿತ ಕಾರ್ಯಚರಣೆ ಮಾಡಲು ಸಹಾಯಹಸ್ತ ಚಾಚುವುದಾಗಿ ವಿಶ್ವ ಬ್ಯಾಂಕ್ ತಿಳಿಸಿದೆ.
ಭಾರತಕ್ಕೆ ವಿಶ್ವ ಬ್ಯಾಂಕ್ ತುರ್ತು ಹಣಕಾಸು ನೆರವಿನ ದೊಡ್ಡ ಭಾಗ ದೊರೆಯಲಿದೆ.
ನೀತಿ ನೀತಿ ಆಧಾರಿತ ಹಣಕಾಸು ಸಹಾಯಕ್ಕೆ ಒತ್ತು ನೀಡಲಾಗಿದ್ದು, ಆ ಮುಖಾಂತರ ವಿವಿಧ ದೇಶಗಳಲ್ಲಿ ವಾಸ ಮಾಡುವ ಬಡ ಕುಟುಂಬಗಳು ಹಾಗೂ ಪರಿಸರ ರಕ್ಷಿಸುವ ಕಾರ್ಯಕ್ಕೆ ಒತ್ತು ನೀಡಲಾಗುತ್ತಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.
ಕೊರೊನಾ ವೈರಸ್ ಸೋಂಕು ವ್ಯಾಪಿಸುವುದನ್ನು ಕಡಿಮೆ ಮಾಡಲು ವಿಶ್ವ ಬ್ಯಾಂಕ್ ತ್ವರಿತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಈಗಾಗಲೇ ನಾವು 65ಕ್ಕೂ ಹೆಚ್ಚು ದೇಶಗಳಲ್ಲಿ ಜನರ ಆರೋಗ್ಯಕ್ಕೆ ಸಂಬಂಧಿಸಿದ ತ್ವರಿತ ಕಾರ್ಯಚರಣೆಯನ್ನು ಮಾಡುತ್ತಿದ್ದೇವೆ ಎಂದು ವಿಶ್ವ ಬ್ಯಾಂಕ್ ಸಮೂಹದ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಹೇಳಿದ್ದಾರೆ.